ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದ ದರ್ಶನ್ ಇದೀಗ ಬಳ್ಳಾರಿ ಜೈಲು ಸೇರಿದ್ದಾರೆ. ಇಲ್ಲಿ ದರ್ಶನ್ ಕಠಿಣ ನಿಯಮಗಳನ್ನು ಪಾಲಿಸಬೇಕಿದೆ. ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗುತ್ತಿದ್ದ ಸೌಲಭ್ಯಗಳು ಇಲ್ಲಿ ಸಿಗುವುದಿಲ್ಲ ಎನ್ನಲಾಗುತ್ತಿದೆ. ಇಂದು ಮುಂಜಾನೆ ದರ್ಶನ್, ಬಳ್ಳಾರಿ ಜೈಲು ಸೇರಿದ್ದು, ಒಳ ಹೋಗುತ್ತಿದ್ದಂತೆ ಪೊಲೀಸರು ದರ್ಶನ್ಗೆ ಶಿಸ್ತಿನ ಅರಿವು ಮೂಡಿಸಿದ್ದಾರೆ.
ಜೈಲಿನ ಒಳಗೆ ಹೋಗುತ್ತಿದ್ದಂತೆ ಮೊದಲಿಗೆ ಜೈಲು ಡೈರಿಯಲ್ಲಿ ದರ್ಶನ್ರ ಮಾಹಿತಿ ಬರೆದುಕೊಳ್ಳಲಾಗಿದೆ. ದರ್ಶನ್ ಆರೋಪಿಯಾಗಿರುವ ಪ್ರಕರಣದ ಮಾಹಿತಿಯನ್ನು ತುಂಬಿಕೊಳ್ಳಲಾಗಿದೆ. ಯಾವ ಜೈಲಿನಿಂದ ಬಂದಿದ್ದಾರೆ, ಯಾವ ಸಮಯಕ್ಕೆ ಬಂದಿದ್ದಾರೆ ಇನ್ನಿತರೆ ಮಾಹಿತಿಗಳನ್ನು ತುಂಬಿಕೊಳ್ಳಲಾಗಿದೆ. ಬಳಿಕ ದರ್ಶನ್ ಕೈಯಲ್ಲಿದ್ದ ಕಡಗ, ಕೊರಳಲ್ಲಿದ್ದ ಮಣಿ ಸರಗಳನ್ನು ಕಳಚುವಂತೆ ಸೂಚಿಸಿದ್ದು, ಆ ವಸ್ತುಗಳನ್ನು ಜೈಲು ಸಿಬ್ಬಂದಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ದರ್ಶನ್ ಕೂಲಿಂಗ್ ಗ್ಲಾಸ್ ಅನ್ನು ಸಹ ಕೊಂಡೊಯ್ದಿದ್ದರು ಅದನ್ನೂ ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ದರ್ಶನ್ಗೆ ಜೈಲಿನಲ್ಲಿಯೇ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಬಳಿಕ ನಿಗದಿತ ಬ್ಯಾರಕ್ಗೆ ಬಿಡಲಾಗಿದೆ.
ವಿಶೇಷ ಆತಿಥ್ಯ ಪಡೆದು ವಿವಾದ ಮಾಡಿಕೊಂಡಿರುವ ಕಾರಣದಿಂದಲೇ ಈಗ ಬಳ್ಳಾರಿ ಜೈಲಿಗೆ ದರ್ಶನ್ ಸ್ಥಳಾಂತರಗೊಂಡಿರುವ ಕಾರಣ, ಬಳ್ಳಾರಿ ಜೈಲಿನಲ್ಲಿ ಆ ರೀತಿಯ ಯಾವುದೇ ಸೌಲಭ್ಯಗಳು ನೀಡದಂತೆ ಉನ್ನತ ಅಧಿಕಾರಿಗಳಿಂದ ಶಿಸ್ತಿನ ಸೂಚನೆಗಳು ಸ್ಥಳೀಯ ಅಧಿಕಾರಿಗಳಿಗೆ ದೊರತಿದೆ. ಹಾಗಾಗಿ ದರ್ಶನ್ ವಿಚಾರದಲ್ಲಿ ತುಸು ಹೆಚ್ಚಿನ ಶಿಸ್ತನ್ನೇ ಜೈಲು ಅಧಿಕಾರಿಗಳು ಪಾಲಿಸಲಿದ್ದಾರೆ ಎನ್ನಲಾಗುತ್ತಿದೆ. ಬಳ್ಳಾರಿ ಜೈಲಿನಲ್ಲಿ 385 ಕೈದಿಗಳು ಈಗಾಗಲೇ ಇದ್ದಾರೆ. ಕೆಲವು ನಟೋರಿಯಸ್ ಹಂತಕರು ಸಹ ಅದೇ ಜೈಲಿನಲ್ಲಿದ್ದಾರೆ. ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದ ಆರೋಪಿಗಳು ಸಹ ಅದೇ ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರದಷ್ಟು ಸುಲಭವಾದ ವಾಸ್ತವ್ಯ ಬಳ್ಳಾರಿ ಜೈಲಿನಲ್ಲಿ ಇರದು ಎನ್ನಲಾಗುತ್ತಿದೆ.
ಅಭಿಮಾನಿಗಳು ಸಮಸ್ಯೆ ಮಾಡಬಾರದೆಂದೇ ತಡ ರಾತ್ರಿ ದರ್ಶನ್ ಅನ್ನು ಬೆಂಗಳೂರಿನ ಜೈಲಿನಿಂದ ಬಳ್ಳಾರಿ ಜೈಲಿಗೆ ಕರೆದುಕೊಂಡು ಹೋಗಲಾಯ್ತು. ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ತಂದ ಸಮಯದಲ್ಲಿ ಜೈಲಿನ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆಗೊಂಡಿದ್ದರು. ಅಭಿಮಾನಿಗಳ ಕೂಗಾಟ-ಕಿರುಚಾಟ ಮಿತಿ ಮೀರಿದಾಗ ಪೊಲೀಸರು ಲಾಠಿ ಬೀಸಿ ಅಭಿಮಾನಿಗಳನ್ನು ಚದುರಿಸಿದ್ದಾರೆ.