ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಜೈಲಿನಲ್ಲಿದ್ದಾರೆ. ಇವರ ಜೊತೆ ಇನ್ನೂ 16 ಮಂದಿ ಕಂಬಿ ಎಣಿಸುತ್ತಿದ್ದಾರೆ. ದರ್ಶನ್ ಬಂಧನವಾಗಿ ಈಗಾಗಲೇ ಮೂರು ತಿಂಗಳುಗಳೇ ಕಳೆದು ಹೋಗಿವೆ. ಈವರೆಗೆ ದರ್ಶನ್ ಕಡೆಯಿಂದ ಜಾಮೀನಿಗೆ ಅರ್ಜಿ ಸಲ್ಲಿಕೆ ಆಗಿಲ್ಲ. ಇಂದು ಕೋರ್ಟ್ ಎದುರು ದರ್ಶನ್ ಅವರನ್ನು ಹಾಜರುಪಡಿಸಲಾಗುತ್ತಿದೆ. ಇಂದಿಗೆ ಅವರ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ.
ಸೆಪ್ಟೆಂಬರ್ 9ರಂದು ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಂಡಿತ್ತು. ಹೀಗಾಗಿ, ಅವರನ್ನು ಕೋರ್ಟ್ ಎದುರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು. ಈ ವೇಳೆ ಚಾರ್ಜ್ಶೀಟ್ ಪ್ರತಿಯನ್ನು ಆರೋಪಿ ಪರ ವಕೀಲರಿಗೆ ನೀಡಲಾಗಿತ್ತು. ಆ ಬಳಿಕ ಜಡ್ಜ್ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 12ರವರೆಗೆ ವಿಸ್ತರಣೆ ಮಾಡಿದ್ದರು. ಬಳ್ಳಾರಿ ಜೈಲಿನಿಂದ ದರ್ಶನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲಿದ್ದಾರೆ. ಸೆಂಟ್ರಲ್ ಜೈಲ್ನ ಹೈ-ಸೆಕ್ಯುರಿಟಿ ಸೆಲ್ನಿಂದ ದರ್ಶನ್ ಹಾಜರಾಗಲಿದ್ದಾರೆ.
ಸೆಪ್ಟೆಂಬರ್ 9ರಂದು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ಗೆ ಹಾಜರಾಗಿದ್ದ ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್ ಅವರು ಪ್ರಕರಣಕ್ಕೆ ಸಂಬಂಧಿಸಿ ಪ್ರಾಥಮಿಕ ಸಾಕ್ಷ್ಯಾಧಾರಗಳ ಸಲ್ಲಿಕೆ ಮಾಡಿದ್ದರು. ಇವುಗಳನ್ನು ಜಡ್ಜ್ ಪರಿಶೀಲನೆ ಮಾಡುವುದಾಗಿ ಹೇಳಿದ್ದರು. ಇನ್ನು ಶೀಘ್ರವೇ ದರ್ಶನ್ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಪೂರ್ತಿ ಚಾರ್ಜ್ಶೀಟ್ ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ದರ್ಶನ್ ಪರ ವಕೀಲ ಶಿವಕುಮಾರ್ ಅವರು ಹೇಳಿದ್ದರು.