ಕಾರು ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಕೆಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಶನಿವಾರ ರಾತ್ರಿ ಸಿದ್ದಮ್ಮ ಪಾರ್ಕ್ ಬಳಿ ನಡೆದಿದೆ. ದಾವಣಗೆರೆ ತಾಲೂಕಿನ ನೇರ್ಲಿಗೆ ಗ್ರಾಮದ ಕುಟುಂಬವೊಂದು ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರು ಚಾಲಕನಿಗೆ ಹೃದಯಾಘಾತವಾಗಿದೆ. ಚಾಲಕನಿಗೆ ಕಾರಿನ ನಿಯಂತ್ರಣ ತಪ್ಪಿದಂತಾಗಿ ಆಟೋರಿಕ್ಷಾ, ನಂತರ ಬೈಕ್ ಗೆ ಡಿಕ್ಕಿ ಹೊಡೆದಿದೆ. ರಸ್ತೆ ಅಕ್ಕಪಕ್ಕದಲ್ಲಿದ್ದವರಿಗೂ ಡಿಕ್ಕಿ ಹೊಡೆದಿದೆ.
ಓರ್ವ ಬಾಲಕಿ ಸೇರಿದಂತೆ ಆರು ಮಂದಿಗೂ ಹೆಚ್ಚು ಜನ ಗಾಯಗೊಂಡಿದ್ದು, ಸದ್ಯಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿದಿದೆ. ಚಾಲಕನಿಗೂ ಸಹ ಚಿಕಿತ್ಸೆಗೆ ನೀಡಲಾಗುತ್ತಿದೆ.