ಒಂದು ಕಡೆ ಸಿದ್ದರಾಮಯ್ಯ ಮುಡಾ ಕೇಸ್ ಹಾಗೂ ಸಿಎಂ ಬದಲಾವಣೆ ಟೆನ್ಶನ್ನಲ್ಲಿದ್ರೆ, ಇನ್ನೊಂದು ಕಡೆ ಡಿಸಿಎಂ ಡಿಕೆಶಿ ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಇಂದಿನಿಂದ ಕುಟುಂಬದ ಜೊತೆ ಅಮೆರಿಕಾ ಟ್ರಿಪ್ ಪ್ಲ್ಯಾನ್ ಮಾಡಿದ್ದಾರೆ. ವಿಶೇಷ ಅಂದ್ರೆ ಅಮೆರಿಕ ಅಧ್ಯಕ್ಷ ಚುನಾವಣೆ ಅಭ್ಯರ್ಥಿ ಕಮಲಾ ಹ್ಯಾರಿಸ್ ಟ್ರಸ್ಟ್ ಜೊತೆ ಡಿಕೆಶಿ ನಂಟು ಹೊಂದಿದ್ದು ಕುತೂಹಲ ಮೂಡಿಸಿದೆ.
ಸಿಎಂ ವಿರುದ್ಧ ಮುಡಾ ಕೇಸ್ ಪ್ರಾಸಿಕ್ಯೂಷನ್ ಶುರುವಾಗಿದ್ದೇ ಆಗಿದ್ದು, ರಾಜ್ಯ ಹಸ್ತಪಾಳಯದಲ್ಲಿ ಸಂಚಲನಕಾರಿ ಬೆಳವಣಿಗೆಗಳು ನಡೀತಾ ಇವೆ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ ಪಾಟೀಲ್ ಸೇರಿದಂತೆ ಕೆಲವು ಘಟಾನುಘಟಿಗಳು ಸಿಎಂ ಕುರ್ಚಿಗಾಗಿ ಟವೆಲ್ ಹಾಕಿದ್ದಾರೆ. ದೆಹಲಿ ನಾಯಕರನ್ನೂ ಭೇಟಿ ಮಾಡಿ, ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ಆದ್ರೆ ಸಿಎಂ ರೇಸ್ನಲ್ಲಿರೋ ಡಿಕೆಶಿ ಮಾತ್ರ ಸೈಲೆಂಟ್ ಆಗಿಬಿಟ್ಟಿದ್ದಾರೆ.
ಸಿಎಂ ಬದಲಾವಣೆ ಚರ್ಚೆಯ ನಡುವೆಯೇ ಡಿಕೆ ಮಾತ್ರ ಕುಟುಂಬ ಸಮೇತ ಫಾರಿನ್ ಟೂರ್ ಕೈಗೊಂಡಿದ್ದಾರೆ. ನಿನ್ನೆ ಸಂಜೆಯೇ ಕುಟುಂಬ ಸಮೇತ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅದಕ್ಕೂ ಮೊದಲು ಮಧ್ಯಾಹ್ನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ, ಪ್ರವಾಸದ ಬಗ್ಗೆ ಮಾಹಿತಿ ನೀಡಿದ್ರು. ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ರು. ಸಿಎಂ ಕುರ್ಚಿಗಾಗಿ ಕೆಲವರು ಲಾಭಿ ನಡೆಸ್ತಿರೋ ಬಗ್ಗೆಯೂ ಗಂಭೀರ ಮಾತುಕತೆ ನಡೆಸಿದ್ದಾರೆ ಅಂತ ತಿಳಿದು ಬಂದಿದೆ.
ನಾರ್ಥ್ ಕ್ಯಾರೋಲಿನಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗಿಯಾಗಲಿದ್ದಾರೆ. ಅಲ್ಲದೇ ಅಮೆರಿಕ ಅಧ್ಯಕ್ಷ ಚುನಾವಣೆಗೆ ನಿಂತಿರೋ ಭಾರತ ಮೂಲದ ಕಮಲಾ ಹ್ಯಾರಿಸ್ರನ್ನೂ ಭೇಟಿಯಾಗಲಿದ್ದಾರೆ ಅಂತ ಹೇಳಲಾಗ್ತಿದೆ. ಅಮೆರಿಕಾದಲ್ಲಿ ನಡೆಯಲಿರುವ ರಾಜತಾಂತ್ರಿಕ ಸಮಾವೇಶದಲ್ಲಿ ಡಿಸಿಎಂ ಭಾಗಿಯಾಗೋ ಸಾಧ್ಯತೆ ಇದೆ. ಅಲ್ಲಿ ಪ್ರಜಾಪ್ರಭುತ್ವ ಮತ್ತು ಚುನಾವಣೆ ಕುರಿತ ಸಂವಾದ ಆಯೋಜನೆ ಆಗಿದೆಯಂತೆ. ಇದರಲ್ಲಿ ಬರಾಕ್ ಒಬಾಮಾ ಕೂಡ ಭಾಗಿಯಾಗಲಿದ್ದಾರಂತೆ.