ಲೋಕಸಭೆ ಚುನಾವಣೆ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಜಿಲ್ಲೆಯ ರಾಜಕಾರಣದ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದು, ಇತ್ತ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಜಿಲ್ಲೆಯ ಬಗ್ಗೆ ಆಸಕ್ತಿ ಕಳೆದುಕೊಂಡಂತೆ ಕಾಣುತ್ತಿದೆ. ಲೋಕಸಭೆಗೂ ಮುನ್ನ ರಾಮನಗರದ ರಾಜಕಾರಣದ ಬಗ್ಗೆ ನೇರವಾಗಿ ಹಾಗೂ ಉತ್ಸುಕರಾಗಿ ಡಿ.ಕೆ. ಶಿವಕುಮಾರ್ ಕಾಣುತ್ತಿರಲಿಲ್ಲ. ಇದಕ್ಕೆ ಭಿನ್ನ ಎಂಬಂತೆ ಸಚಿವ ರಾಮಲಿಂಗಾರೆಡ್ಡಿ ಅವರು ಆಗಾಗ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಂಡು ಜಿಲ್ಲೆಯಲ್ಲಿ ಚಲನಶೀಲರಾಗಿದ್ದರು. ಆದರೆ, ಈಗ ಲೋಕಸಭೆ ಚುನಾವಣೆ ಮುಗಿದರೂ ಕೆಡಿಪಿ ಸಭೆ ನಡೆಸದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಾಮಾನ್ಯವಾಗಿ ಪ್ರಗತಿ ಪರಿಶೀಲನೆ ಸಭೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕು. ಆದರೆ, ರಾಮನಗರ ಜಿಲ್ಲೆಯ ಕೆಡಿಪಿ ಸಭೆ ನಡೆದು ನಾಲ್ಕು ತಿಂಗಳು ಕಳೆದಿವೆ. ಲೋಕಸಭೆ ನೀತಿ ಸಂಹಿತೆ ಜಾರಿಗೆ ಕೆಲವು ದಿನಗಳ ಮುನ್ನ ರಾಮಲಿಂಗಾರೆಡ್ಡಿ ಕೆಡಿಪಿ ಸಭೆ ನಡೆಸಿದ್ದರು. ನಂತರ ಸಿಎಸ್ಆರ್ ನಿಧಿ ಅಡಿಯಲ್ಲಿ ಮಾದರಿ ಶಾಲೆಗಳ ನಿರ್ಮಾಣ ಸಂಬಂಧ ಕರೆದಿದ್ದ ಸಭೆಯಲ್ಲಿ ಸಚಿವರು ಪಾಲ್ಗೊಂಡಿದ್ದರು. ಇದಾದ ನಂತರ ಇತ್ತೀಚಿಗೆ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ ಪ್ರಗತಿ ಪರಿಶೀಲನೆ ಸಭೆಯನ್ನು ಕರೆದೇ ಇಲ್ಲ.