ಹೇಳೀ ಕೇಳಿ ದೀಪಾವಳಿ ಎಂದರೆ ಬೆಳಕಿನ ಹಬ್ಬ. ದೀಪಾವಳಿ ಹಬ್ಬದಲ್ಲಿ ಬಣ್ಣ ಬಣ್ಣದ ಪಟಾಕಿಗಳಿಗೆ ಎಷ್ಟು ಪ್ರಾಮುಖ್ಯತೆಯೂ ಅದಕ್ಕಿಂತಲೂ ಒಂದು ಕೈ ಹೆಚ್ಚಿನ ಪ್ರಾಮುಖ್ಯತೆ ಬಗೆ ಬಗೆಯ ದೀಪಗಳಿಗೆ ಎಂದರು ತಪ್ಪಾಗದು. ಹಾಗಾಗಿ ದೀಪಾವಳಿ ಹಬ್ಬ ಬರುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ಬಗೆ ಬಗೆಯ ದೀಪಗಳು ಲಭ್ಯವಿದ್ದು, ಇತ್ತೀಚೆಗೆ ಆ ದೀಪಗಳ ಜೊತೆ ಆಕರ್ಷಕ ಆಕಾಶ ಬುಟ್ಟಿಗಳು ಸೇರಿಕೊಂಡು ಗ್ರಾಹಕರನ್ನು ಆಕರ್ಷಿಸುತ್ತಿವೆ.
ಇತ್ತೀಚೆಗಂತೂ ಕಾರ್ತೀಕ ಮಾಸವಿಡೀ ಬಹುತೇಕರ ಮನೆಗಳ ಮುಂದೆ ಆಕರ್ಷಕ ಬಣ್ಣ ಬಣ್ಣದ ಆಕಾಶ ಬುಟ್ಟಿಗಳನ್ನು ನೇತು ಹಾಕುವುದು ಒಂದು ರೀತಿಯ ಫ್ಯಾಷನ್ ಆಗಿದೆಯಾದರೂ, ದೀಪಾವಳಿ ಸಮಯದಲ್ಲಿ ಆಕಾಶ ಬುಟ್ಟಿಗಳನ್ನು ತಯಾರಿಸಿ ಹಾರಿಬಿಡುವುದು ನಮ್ಮ ಸಂಪ್ರದಾಯದ ಅವಿಭಾಜ್ಯ ಆಂಗವಾಗಿದೆ ಎಂದರೆ ಎಲ್ಲರಿಗೂ ಅಶ್ಚರ್ಯವಾಗಬಹುದು. ಹಾಗಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಆಕಾಶ ಬುಟ್ಟಿ ಏಕೆ ಹಾರಿ ಬಿಡುತ್ತಾರೆ? ಎಂಬುದರ ಕುರಿತಾಗಿ ತಿಳಿಯೋಣ ಬನ್ನಿ.
ಭಾದ್ರಪದ ಮಾಸದ ಕೃಷ್ಣಪಕ್ಷದ ಪಾಡ್ಯದಿಂದ ಅಮಾವಾಸ್ಯೆಯವರೆಗೂ ಪಿತೃಪಕ್ಷ ಎಂದು ಕರೆಯಲಾಗುವ ಈ ಹದಿನೈದು ದಿನಗಳಲ್ಲಿ ಸೂರ್ಯನು ಕನ್ಯಾರಾಶಿಗೆ ಪ್ರವೇಶಿಸಿ ನಂತರದ ಮುಂದಿನ ರಾಶಿಗೆ ಹೋಗುವ ಮಧ್ಯದ ಸಮಯದಲ್ಲಿ ನಮ್ಮನ್ನು ಅಗಲಿದ ಪಿತೃಗಳ ಆತ್ಮವು ಭೂಮಿಯಲ್ಲಿರುವ ತಮ್ಮ ವಂಶಜರ ಮನೆಗಳಿಗೆ ಬಂದು ಹೋಗುತ್ತವೆ ಎಂಬ ನಂಬಿಕೆ ನಮ್ಮಲ್ಲಿರುಅ ಕಾರಣ, ಈ ಸಮಯದಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ತಮ್ಮ ಕುಲದ ಎಲ್ಲ ಪಿತೃಗಳೂ ಸೇರಿದಂತೆ ಅಗಲಿದ ಆವರ ಆಪ್ತರು, ಬಂಧು-ಮಿತ್ರರು ಮತ್ತು ಸಾಕುಪ್ರಾಣಿಗಳಿಗೂ ಸಹಾ ತರ್ಪಣ ಕೊಡುವ ಸಂಪ್ರದಾಯವನ್ನು ರೂಢಿಸಿಕೊಂಡಿದ್ದೇವೆ.
ಪಿತೃಪಕ್ಷದ ಕಡೆಯ ದಿನವಾದ ಅಮಾವಾಸ್ಯೆಯಂದು ಶ್ರಾದ್ಧ ಕಾರ್ಯಗಳೆಲ್ಲವೂ ಮುಗಿದು ಅವರೆಲ್ಲರೂ ತಮ್ಮ ಲೋಕಕ್ಕೆ ಹೊರಡಲು ಅನುವಾದಾಗ, ಹೇಗೂ ಬಹಳ ದಿನಗಳ ನಂತರ ಬಂದಿದ್ದೀರೀ ದಸರಾ ಹಬ್ಬ ಆರಂಭವಾಗಿದೆ. ದಸರಾ ಹಬ್ಬವನ್ನೂ ಮುಗಿಸಿಕೊಂಡು ಹೋಗಿ ಎಂದು ಕೇಳಿಕೊಳ್ಳುವ ಕಾರಣದಿಂದಲೋ ಇಲ್ಲವೇ, ಅವರುಗಳೇ ಹೇಗೂ ಭೂಮಿಗೆ ಬಂದಿದ್ದೀವಿ. ನಮ್ಮ ಕುಲದವರೂ ಸಹಾ ನಮಗೆ ಸಕಲ ಆದರಾತಿಥಿಗ್ಯಗಳಿಂದ ನೋಡಿಕೊಂಡ ಪರಿಣಾಮ ಬಹಳ ಸಂಪ್ರೀತಿಯಾಗಿ ಹಿಂದಿರುಗಲು ಮನಸ್ಸೇ ಆಗದ ಕಾರಣ ಇನ್ನೂ ಕೆಲಕಾಲ ಇಲ್ಲಿಯೇ ಇದ್ದು ಹೋಗೋಣ ಎಂದು ಇಲ್ಲಿಯೇ ಇದ್ದು ದೀಪಾವಳಿ ಹಬ್ಬವೆಲ್ಲವೂ ಮುಗಿದು ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆಯೇ ಕಾರ್ತೀಕ ಶುದ್ಧ ಪಾಡ್ಯಮಿಯಂದು ಅಲ್ಲಿದೇ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂದು ಒಲ್ಲದ ಮನಸ್ಸಿನಿಂದಲೇ ಭೂಲೋಕದಿಂದ ಆಕಾಶಮಾರ್ಗದ ಮೂಲಕ ತಮ್ಮ ತಮ್ಮ ಲೋಕಗಳಿಗೆ ಪ್ರಯಾಣಿಸಲು ಅನುವಾಗುವ ಪಿತೃಗಳಿಗೆ ದಾರಿ ತೋರಿಸುವುದಕ್ಕಾಗಿ ಒಂದು ದೀಪವನ್ನು ನಮ್ಮ ಕಡೆಯಿಂದ ವ್ಯವಸ್ಥೆ ಮಾಡಬೇಕು ಎಂಬ ಪದ್ದತಿ ಇದ್ದು, ಹಾಗೆ ಕತ್ತಲಿನಲ್ಲಿ ದಾರಿ ದೀಪವಾಗಲೆಂದೇ ಹಾರಿಸುವ ದಾರಿ ದೀಪವನ್ನು ಆಕಾಶ ಬುಟ್ಟಿ ಇಲ್ಲವೇ ಆಕಾಶ ದೀಪ ಎಂದು ಕರೆಯಲಾಗುತ್ತದೆ.
ಈ ರೀತಿಯ ಆಕಾಶಬುಟ್ಟಿಗಳನ್ನು ತಯಾರಿಸುವುದುದಕ್ಕೂ ಒಂದು ನೀತಿ ನಿಯಮಗಳಿದ್ದು ಮುತ್ತುಗ, ಅರಳಿ, ಕಗ್ಗಲಿ, ಬನ್ನಿ ಮುಂತಾದ ಯಜ್ಞಕ್ಕೆ ಬಳಸುವ ಮರದ ಎಂಟು ಕಡ್ಡಿಗಳಿಂದಲೇ ಆಕಾಶ ಬುಟ್ಟಿಯ ಅಸ್ತಿಪಂಜರವನ್ನು ನಿರ್ಮಿಸಿ, ನಂತರ ಅದಕ್ಕೆ ಬಣ್ಣದ ಕಾಗದಗಳನ್ನೂ ಇಲ್ಲವೇ ಬಟ್ಟೆಗಳನ್ನು ಅಂಟಿಸಿ ಚಂದದಿಂದ ಅಲಂಕರಿಸಿ, ಅದರೊಳಗೆ ಒಂದು ಎಣ್ಣೆಯ ದೀಪವನ್ನು ಹತ್ತಿಸಿದಾಗ, ದೀಪದ ಶಾಖದಿಂದಾಗಿ ಬುಟ್ಟಿಯಲ್ಲಿರುವ ಗಾಳಿ ಎಲ್ಲವೂ ಕಡಿಮೆಯಾದಾಗ ಅಲ್ಲೊಂದು ನಿರ್ವಾತ ಉಂಟಾಗಿ ಸುತ್ತಮುತ್ತಲಿನ ಗಾಳಿಯ ಪ್ರಭಾವದಿಂದ ಮೇಲೆ ಹಾರಲು ಆರಂಭಿಸುತ್ತದೆ. ಈ ರೀತಿಯ ಬಣ್ಣ ಬಣ್ಣದ ಆಕಾಶ ಬುಟ್ಟಿಗಳು ಏಕ ಕಾಲದಲ್ಲಿ ಆಕಾಶದಲ್ಲಿ ಹಾರಡುವುದನ್ನು ನೋಡಲು ಬಹಳ ರಮಣೀಯವಾಗಿದ್ದು ಅದನ್ನು ವರ್ಣಿಸುವುದಕ್ಕಿಂತಲೂ ನೋಡಿ ಅನುಭವಿಸಿದರೆ ಮನಸ್ಸಿಗೆ ಹೆಚ್ಚಿನ ಮುದ ನೀಡುತ್ತದೆ ಎಂದರೂ ತಪ್ಪಾಗದು.
ಹಿಂದಿನ ಕಾಲದಲ್ಲಿ ಹೀಗೆ ಹಾರಿಸಿದ ಆಕಾಶ ದೀಪಗಳು ಮುಂದೆ ಎಲ್ಲೋ ಯಾವುದೋ ಗುಡಿಸಲಿನ ಮೇಲೆ ಬಿದ್ದು ಅಲ್ಲಿನ ಮಾಡು ಹತ್ತಿಕೊಂಡು ಉರಿದು ಹೋಗುತ್ತಿತ್ತು ಇಲ್ಲವೇ ಯಾರದ್ದೋ ಹೊಲ ಗದ್ದೆಗಳಲ್ಲಿ ಜೋಪಾನವಾಗಿ ಇಟ್ಟಿರುತ್ತಿದ್ದ ಬಣವೆಗಳಿಗೆ ಬೆಂಕಿ ಹತ್ತಿಕೊಳ್ಳುವುದೋ ಇಲ್ಲವೇ ಯಾವುದೋ ಕಾಡಿನ ಒಣಗಿದ ಮರಕ್ಕೆ ಈ ಆಕಾಶ ಬುಟ್ಟಿಯ ಬೆಂಕಿ ತಾಗಿ ಕಾಳ್ಗಿಚ್ಚು ಉಂಟಾಗಿ ಇಡೀ ಕಾಡು ಹೊತ್ತಿ ಉರಿದು ಹೋಗುತ್ತಿರುವುದನ್ನು ಗಮನಿಸಿ, ಈ ರೀತಿಯ ಆಕಾಶ ಬುಟ್ಟಿಗಳನ್ನು ಹಾರಿಬಿಡುವ ಸಂಪ್ರದಾಯವನ್ನು ಕೈ ಬಿಡಲಾಯಿತು.
ನಂತರದ ದಿನಗಳಲ್ಲಿ ಹಿರಿಯರ ಒತ್ತಾಯಕ್ಕೆ ಮಣಿದು ಬಿದಿರಿನ ಕಡ್ಡಿಗಳಿಂದ ಅಸ್ತಿಪಂಜರವನ್ನು ನಿರ್ಮಿಸಿ, ಅದಕ್ಕೆ ಬಣ್ಣದ ಬಣ್ಣದ ಕಾಗದಗಳನ್ನು ಅಂಟಿಸಿ ಚಂದದಿಂದ ಅಲಂಕರಿಸಿ, ಅದರೊಳಗೆ ದೀಪವನ್ನು ಹತ್ತಿಸಿ ಮನೆಗಳ ಮುಂದೆ ಎತ್ತರದ ಜಾಗದಲ್ಲಿ ಕಾರ್ತೀಕಮಾಸವಿಡೀ ತೂಗು ಹಾಕುವ ಸಂಪ್ರದಾಯ ರೂಡಿಗೆ ಬಂದಿತು. ಕಾಲಾನಂತರದಲ್ಲಿ ಆಧುನಿಕತೆ ಹೆಚ್ಚಾದಂತೆಲ್ಲಾ, ಈ ರೀತಿಯ ಆಕಾಶ ಬುಟ್ಟಿಗಳ ತಯಾರಿಕೆಯಲ್ಲಿಯೂ ವಿವಿಧ ರೀತಿಯ ಬದಲಾವಣೆಗಳಾಗಿ ಬಿದಿರು ಕಡ್ದಿಗಳ ಜಾಗದಲ್ಲಿ ಲೋಹದ ತಂತಿಗಳೋ ಇಲ್ಲವೇ ಪ್ಲಾಸ್ಟಿಕ್ ಕಡ್ಡಿಗಳನ್ನು ಬಳಸಿ ಬಣ್ಣ ಬಣ್ಣದ ಕಾಗದ, ಬಟ್ಟೆಗಳು ಇಲ್ಲವೇ ಪ್ಲಾಸ್ಟಿಕ್ ಗಳಿಂದ ಅಲಂಕರಿಸಿ ಅವುಗಳ ಮಧ್ಯೆ ವಿದ್ಯುದ್ದೀಪವನ್ನು ಜೋಡಿಸಿ ವಿವಿಧ ಆಕಾರಗಳಲ್ಲಿ ಮನೆಗಳ ಮುಂದೆ ದೀಪಾವಳಿಯ ಅಮಾವಾಸ್ಯೆಯ ರಾತ್ರಿಯಿಂದ ಆರಂಭಿಸಿ ಕಾರ್ತೀಕ ಮಾಸವಿಡೀ ಬೆಳಗಿಸುವ ಸಂಪ್ರದಾಯವನ್ನು ರೂಢಿಗೆ ತಂದುಕೊಂಡಿದ್ದಾರೆ. ಹೀಗೆ ತಮ್ಮ ಮನೆಯ ಮುಂದಿನ ಎತ್ತರದ ಜಾಗದಲ್ಲಿ ಇರಿಸುವ ಈ ರೀತಿಯ ಆಕಾಶ ಬುಟ್ಟಿಗಳ ದೀಪದ ಬೆಳಕಿನಲ್ಲಿ ತಮ್ಮ ಪೂರ್ವಜರು ತಮ್ಮ ಲೋಕವನ್ನು ಸೇರಿಕೊಳ್ಳಲಿ ಎಂಬ ಉದ್ದೇಶವಾಗಿದೆ.
ಪುರಾತನ ಕಾಲದಿಂದಲೂ ಪ್ರತಿವರ್ಷವೂ ಕಾರ್ತಿಕ ಮಾಸದಲ್ಲಿ ಸಂಪ್ರದಾಯಕವಾಗಿ ಆಕಾಶ ಬುಟ್ಟಿ ಹಾಗೂ ಗಾಳಿಪಟ ಹಾರಿಸುವ ಪದ್ಧತಿ ರೂಢಿಯಲ್ಲಿದ್ದು, ಕಾಲಾನಂತರ ಆಧುನಿಕತೆಯ ಪ್ರಭಾವ ಹೆಚ್ಚಾದಂತೆಲ್ಲಾ ಈ ಪ್ರಾಚೀನ ಮತ್ತು ಸಂಪ್ರದಾಯಿಕ ಕಲೆಗಳು ಅಳಿವಿನ ಅಂಚಿಗೆ ಬಂದು ತಲುಪಿರುವುದನ್ನು ಗಮನಿಸಿ, ಈ ಗಾಳಿಪಟ ಹಾಗೂ ಆಕಾಶ ಬುಟ್ಟಿ ಹಾರಿಸುವ ಸಾಂಪ್ರದಾಯಿಕ ಪ್ರಾಚೀನ ಕಲೆಗಳನ್ನು ಇಂದಿನ ಪೀಳಿಗೆಯವರಿಗೂ ಪರಿಚಯಿಸಿ ಅದನ್ನು ಉಳಿಸಿ-ಬೆಳೆಸಲು ಹುಬ್ಬಳ್ಳಿಯಲ್ಲಿ ಇತ್ತೀಚಿನ ಕೆಲವರ್ಷಗಳಿಂದ ಗಾಳಿಪಟ ಹಾಗೂ ಆಕಾಶ ಬುಟ್ಟಿ ಹಾರಿಸುವ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಈ ಸಂಪ್ರದಾಯದ ಪುನರುತ್ಥಾನಕ್ಕೆ ಮುಂದಾಗಿರುವುದು ಶ್ಲಾಘನೀಯವಾಗಿದೆ.