ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಹುಲ್ಲು ಸುಡುವಿಕೆಯಿಂದೆ ದೆಹಲಿಯಲ್ಲಿ ಉಂಟಾದ ವಾಯು ಮಾಲಿನ್ಯ ಅಪಾಯದ ಮಟ್ಟ ಮೀರಿದೆ. ಸತತ 6ನೇ ದಿನವೂ ವಾಯುಮಾಲಿನ್ಯ ಮುಂದುವರಿದಿದ್ದು ಉಸಿರಾಡುವ ಗಾಳಿ ವಿಷವಾಗುತ್ತಿದೆ. ಸೋಮವಾರ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 1,500ರ ಗಡಿ ದಾಟಿದೆ.
ಸೋಮವಾರ ಬೆಳಗ್ಗೆ ದೆಹಲಿಯ ಮುಂಡ್ಕಾದಲ್ಲಿ 1591 ಎಕ್ಯೂಐ, ದ್ವಾರಕ-8ನೇ ಸೆಕ್ಟಾರ್ನಲ್ಲಿ ಎಕ್ಯೂಐ 1,497 ಹಾಗೂ ರೋಹಿಣಿ ಸೆಕ್ಟಾರ್ನಲ್ಲಿ 1,427 ಎಕ್ಯೂಐ ದಾಖಲಾಗಿದೆ. ಗೋಚರತೆ ಪ್ರಮಾಣ ಇನ್ನಿಲ್ಲದಂತೆ ಕುಸಿದಿದೆ. ರಸ್ತೆ, ರೈಲು, ವೈಮಾನಿಕ ಸೇವೆಗಳಲ್ಲಿ ತೀವ್ರ ವ್ಯತ್ಯಯವಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಹೆಚ್ಚಿದ ವಾಯು ಮಾಲಿನ್ಯದಿಂದ ದೆಹಲಿ ಜನರಲ್ಲಿ ಉಸಿರಾಟ ಸಮಸ್ಯೆ ತೀವ್ರವಾಗಿದೆ.
ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದೆ. ಅಪಾಯದ ಮಟ್ಟ ಮೀರಿದ ಮಾಲಿನ್ಯ ನಿಯಂತ್ರಣಕ್ಕೆ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ನ 4ನೇ ಹಂತವನ್ನು ದೆಹಲಿ ಸರ್ಕಾರ ಜಾರಿ ಮಾಡಿದೆ. ಮಾಲಿನ್ಯ ವಿಚಾರವಾಗಿ ಆಳುವ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ನಾವು ಹೇಳೋವರೆಗೂ ಜಿಆರ್ಎಪಿ-4 ನಿಯಮ ಸಡಿಲಿಸಬಾರದು. ಎಕ್ಯೂಐ 400ಕ್ಕಿಂತ ಕಡಿಮೆಯಾದ್ರೂ ಈ ನಿಯಮ ಸಡಿಲಿಸಬಾರದು ಎಂದು ಸೂಚಿಸಿದೆ. ಆದರೆ, ವಾಯುಮಾಲಿನ್ಯ ವಿಚಾರವಾಗಿ ರಾಜಕೀಯ ನಡೆದಿದೆ. ವಾಯು ಮಾಲಿನ್ಯ ತೀವ್ರ ಸ್ವರೂಪ ಪಡೆಯೋವರೆಗೂ ಕೇಂದ್ರ ಅಚೇತನವಾಗಿತ್ತು. ಯಾವುದೇ ಮುಂಜಾಗ್ರತೆ ವಹಿಸಲಿಲ್ಲ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹುಲ್ಲು ಸುಡುತ್ತಿರುವುದೇ ದೆಹಲಿ ಮಾಲಿನ್ಯಕ್ಕೆ ಕಾರಣ ಎಂದು ಸಿಎಂ ಅತಿಶಿ ದೂರಿದ್ದಾರೆ.