ಅಬಕಾರಿ ನೀತಿಯಲ್ಲಿ ಅಕ್ರಮದ ಆರೋಪದ ಮೇಲೆ ಸಿಬಿಐನಿಂದ ಬಂಧನಕೊಳ್ಳಪಟ್ಟ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಇಡಿ ಪ್ರಕರಣದಿಂದ ಜಾಮೀನು ಪಡೆದ ಹಿನ್ನೆಲೆ ಸಿಬಿಐ ಹತಾಶೆಯಿಂದ ಅವರನ್ನು ಬಂಧಿಸಿದೆ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠ ಶುಕ್ರವಾರ ತನ್ನ ಆದೇಶ ಪ್ರಕಟಿಸಿದೆ.
ಹತ್ತು ಲಕ್ಷದ ಬಾಂಡ್ ಸಲ್ಲಿಸಬೇಕು, ಅಧೀನ ನ್ಯಾಯಲಯದ ಮುಂದೆ ವಿಚಾರಣೆಗೆ ಗೈರಾಗಬಾರದು, ಮಾಹಿತಿ ನೀಡದೇ ದೇಶ ತೊರೆಯಬಾರದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಮಾತನಾಡಬಾರದು ಎಂದು ಷರತ್ತು ವಿಧಿಸಿದೆ. ಇದರ ಜೊತೆ ಮುಖ್ಯಮಂತ್ರಿ ಕಚೇರಿ ಅಥವಾ ದೆಹಲಿ ಸಚಿವಾಲಯಕ್ಕೆ ಭೇಟಿ ನೀಡುವುದನ್ನು ಸುಪ್ರೀಂ ಕೋರ್ಟ್ ನಿರ್ಬಂಧಿಸಿದೆ.