ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಶನಿವಾರ ಎರಡು ವರ್ಷ ಪೂರ್ಣಗೊಳಿಸಿದ್ದು, ಪಕ್ಷದ ಬಲವರ್ಧನೆಗಾಗಿ ಅವರ ಕೊಡುಗೆಯನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿನ ಪಕ್ಷದ ನಾಯಕರು ಗುಣಗಾನ ಮಾಡಿದ್ದಾರೆ. ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಕ್ಟೋಬರ್ 26, 2022 ರಂದು ಅಧಿಕಾರ ಸ್ವೀಕರಿಸಿದ್ದರು. ಅವರು 24 ವರ್ಷಗಳಲ್ಲಿ ಈ ಹುದ್ದೆಗೆ ಆಯ್ಕೆಯಾದ ಮೊದಲ ಗಾಂಧಿಯೇತರ ನಾಯಕರಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿನ ತಮ್ಮ ನಿವಾಸದಲ್ಲಿ ಕೇಕ್ ಕತ್ತರಿಸುವ ಮೂಲಕ 82 ವರ್ಷದ ಖರ್ಗೆ ಅವರು ಸಂಭ್ರಮಿಸಿದ್ದಾರೆ. ರಾಹುಲ್ ಗಾಂಧಿ, ಅಜಯ್ ಮಾಕೇನ್, ಜೈರಾಮ್ ರಮೇಶ್ ಕುಮಾರಿ ಶೆಲ್ಜಾ ಮತ್ತಿತರ ನಾಯಕರು ಖರ್ಗೆ ಅವರಿಗೆ ಶುಭ ಕೋರಿದ್ದಾರೆ.
ಖರ್ಗೆ ಅವರ ಎರಡು ವರ್ಷಗಳ ಅಧಿಕಾರವಧಿಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸುಧಾರಣೆ ಕಂಡಿದೆ. 2019ರ ಚುನಾವಣೆಯಲ್ಲಿ 52 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಅಲ್ಲದೇ ಹಿಮಾಚಲ ಪ್ರದೇಶ, ಕರ್ನಾಟಕ, ತೆಲಂಗಾಣದಲ್ಲಿ ಪಕ್ಷ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಜಮ್ಮು- ಕಾಶ್ಮೀರದಲ್ಲಿ ಮೈತ್ರಿ ಸರ್ಕಾರದ ಭಾಗವಾಗಿದೆ. ಆದಾಗ್ಯೂ, ಛತ್ತೀಸ್ ಗಢ, ರಾಜಸ್ಥಾನ, ಹರಿಯಾಣ ಮತ್ತು ಮಧ್ಯಪ್ರದೇಶದಲ್ಲಿ ಅಧಿಕಾರಿ ಹಿಡಿಯುವಲ್ಲಿ ವಿಫಲವಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಖರ್ಗೆ ಅವರಿಗೆ ಶುಭ ಕೋರಿ ಫೋಸ್ಟ್ ಮಾಡಿರುವ ರಾಹುಲ್ ಗಾಂಧಿ, ನಿಮ್ಮ ನಾಯಕತ್ವ ಜನರ ಸೇವೆ ಮಾಡುವ ಪಕ್ಷದ ಸಂಕಲ್ಪವನ್ನು ಬಲಪಡಿಸಿದೆ. ನಿಮ್ಮ ಹೋರಾಟ ಮತ್ತು ಅನುಭವ ನಮಗೆ ಸ್ಫೂರ್ತಿಯಾಗಿದೆ. ಸಂವಿಧಾನ ಮತ್ತು ಸಾರ್ವಜನಿಕ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ನ್ಯಾಯದ ಪ್ರತಿಯೊಬ್ಬ ಯೋಧರಿಗೂ ನಿಮ್ಮ ಮಾರ್ಗದರ್ಶನ ಮೌಲ್ಯಯುತವಾಗಿದೆ ಎಂದು ಬರೆದುಕೊಂಡಿದ್ದಾರೆ.ಬಡ ದಲಿತ ಕುಟುಂಬದಲ್ಲಿ ಜನಿಸಿದ ಖರ್ಗೆ ಅವರು ಪಕ್ಷದಲ್ಲಿ ಸಾಕಷ್ಟು ಉನ್ನತ ಹುದ್ದೆ ಅಲಂಕರಿಸಿದ್ದಾರೆ. 1996 ರಿಂದ 1999 ರವರೆಗೆ ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. 2005 ರಿಂದ 2008 ರವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 2021 ರಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. 2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಗುಲ್ಬರ್ಗಾದಿಂದ ಗೆದ್ದು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು.
ಇದನ್ನು ಓದಿ: ಎರಡು ದಿನ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ!
2020 ರಿಂದ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. 2016 ರಿಂದ 2019 ರವರೆಗೆ 16 ನೇ ಲೋಕಸಭೆಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿದ್ದರು.ಯುಪಿಎ 2 ಸರ್ಕಾರದ ಅವಧಿಯಲ್ಲಿ 2013 ರಿಂದ 2014 ರವರೆಗೆ ರೈಲ್ವೆ ಸಚಿವರಾಗಿ ಮತ್ತು 2009 ರಿಂದ 2013 ರವರೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಅವರು 2018 ರಿಂದ 2020 ರವರೆಗೆ ಮಹಾರಾಷ್ಟ್ರದ ಉಸ್ತುವಾರಿ ಆಗಿದ್ದರು.1972 ರಿಂದ 2008 ರವರೆಗೆ ಗುರ್ ಮಿಠ್ಕಲ್ ವಿಧಾನಸಭಾ ಕ್ಷೇತ್ರದಿಂದ ಮತ್ತು 2008 ರಿಂದ 2009 ರವರೆಗೆ ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದ ಖರ್ಗೆ ಅವರುಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 2019ರ ಲೋಕಸಭಾ ಚುನಾವಣೆ ಹೊರತುಪಡಿಸಿದರೆ ಉಳಿದೆಲ್ಲಾ ಚುನಾವಣೆಯಲ್ಲೂ ತನ್ನ ವಿರೋಧಿ ಅಭ್ಯರ್ಥಿಗಳನ್ನು ಸೋಲಿಸಿದ ದಾಖಲೆಗೆ ಅವರು ಹೆಸರುವಾಸಿಯಾಗಿದ್ದಾರೆ.