ದೆಹಲಿಯಲ್ಲಿ ಮಾಲಿನ್ಯದ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು ಶುಕ್ರವಾರ ವಾಯು ಗುಣಮಟ್ಟದ ಸೂಚ್ಯಂಕ 411ಕ್ಕೆ ಏರಿದೆ. ಈ ಮಲಿನ ಗಾಳಿಯ ಉಸಿರಾಟವು ದಿನವೊಂದಕ್ಕೆ 25 ಸಿಗರೇಟ್ ಸೇದುವುದಕ್ಕೆ ಸಮ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ದಿಲ್ಲಿಯಲ್ಲಿ ಮಾಲಿನ್ಯ 3 ದಿನದಿಂದ ಗಂಭೀರ ಸ್ಥಿತಿಯಲ್ಲೇ ಮುಂದುವರೆದಿದೆ.
ಹಾಗಾಗಿ, ವಾಯುಗುಣಮಟ್ಟ ನಿಯಂತ್ರಣ ಮಂಡಳಿಯು 3ನೇ ಹಂತದ ನಿಯಂತ್ರಣ ಹೇರಿದೆ. ಕಟ್ಟಡಗಳ ನಿರ್ಮಾಣ, ಧ್ವಂಸ, ಕೈಗಾರಿಕೆಗಳಿಗೆ ನಿರ್ಬಂಧ ಹಾಗೂ ಬಿಎಸ್-3 ಪೆಟ್ರೋಲ್, ಬಿಎಸ್-4 ಡೀಸೆಲ್ ವಾಹನ ನಿಷೇಧಿಸಲಾಗಿದೆ. ವಿಷಾನಿಲ ಮಿಶ್ರಿತ ಗಾಳಿಯಿಂದ ಶ್ವಾಸಕೋಶ ಸೇರಿ ಹಲವು ರೀತಿ ಕ್ಯಾನ್ಸರ್ ಜನರನ್ನು ಕಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ದೆಹಲಿಯಲ್ಲಿ ಧೂಳಿನ ಪ್ರಮಾಣ ಪ್ರತಿ ಘನ ಮೀಟರ್ಗೆ 247 ಮಿಲಿ ಗ್ರಾಂನಷ್ಟಿದೆ. ಇದರ ಆರೋಗ್ಯಕರ ಪ್ರಮಾಣ 15 ಮಿಲಿಗ್ರಾಂ ಮಾತ್ರ. ಹೀಗಾಗಿ ಈ ಗಾಳಿಯನ್ನು ಉಸಿರಾಡುವ ಜನರಿಗೆ ಗಂಟಲು, ಕತ್ತು ಮತ್ತು ಶ್ವಾಸಕೋಶದ ಕ್ಯಾನ್ಸರ್ ಕಾಡುವ ಭೀತಿ ಎದುರಾಗಿದೆ. ಅಲ್ಲದೇ ದೆಹಲಿಯ ಗಾಳಿಯಲ್ಲಿ ಓಝೋನ್, ಸಲ್ಫರ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್ ಹೆಚ್ಚಿದ್ದು, ಜನರ ಆಯುಷ್ಯ 7.8 ವರ್ಷ ಕುಸಿಯಬಹುದು ಎಂದು ಅಮೆರಿಕದ ಸಂಸ್ಥೆಯೊಂದು ಹೇಳಿದೆ.