ಇಂದು ದೆಹಲಿ ಕ್ಯಾಬಿನೆಟ್ ಮಹತ್ವದ ಯೋಜನೆಗೆ ಅನುಮೋದನೆ ನೀಡಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಹಣಕಾಸು ನೆರವು ನೀಡುವ ಪ್ರಸ್ತಾವನೆಗೆ ಕ್ಯಾಬಿನೆಟ್ ಅಸ್ತು ಎಂದಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ನಾಳೆಯಿಂದಲೇ ಈ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಮುಂದಿನ 10 ರಿಂದ 15 ದಿನಗಳಲ್ಲಿ ದೆಹಲಿ ವಿಧಾನಸಭಾ ಚುನಾವಣೆಯ ದಿನಾಂಕಗಳು ಪ್ರಕಟವಾಗುವುದರಿಂದ ಹಣವನ್ನು ತಕ್ಷಣವೇ ಠೇವಣಿ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ, 1,000 ರೂ.ಗಳ ಸಹಾಯವನ್ನು 2,100 ರೂ.ಗಳಿಗೆ ಹೆಚ್ಚಿಸಲಾಗುವುದು. ಚುನಾವಣೆಯನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿರುವುದರಿಂದ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದಿಲ್ಲ. ಆದರೆ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ ಹೆಸರಿನ ಯೋಜನೆಗೆ ನೋಂದಣಿ ನಾಳೆ ಪ್ರಾರಂಭವಾಗಲಿದೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿಯ ಪ್ರತಿ ಮಹಿಳೆಗೆ 1,000 ರೂ. ನೀಡುವುದಾಗಿ ಹಿಂದೆ ಭರವಸೆ ನೀಡಿದ್ದೆ. ಆದರೆ ಕೆಲವು ಮಹಿಳೆಯರು ನನ್ನ ಬಳಿಗೆ ಬಂದು 1,000 ರೂ. ಸಾಲುವುದಿಲ್ಲ ಎಂದು ಹೇಳಿದ್ದರು. ಆದ್ದರಿಂದ ಎಲ್ಲರಿಗೂ ನೆರವಾಗುವಂತೆ 2,100 ರೂ. ನೀಡಲು ನಿರ್ಧರಿಸಿದ್ದೇವೆ. ಈ ಬಗ್ಗೆ ಸಿಎಂ ಅತಿಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಯನ್ನು ಅನುಮೋದನೆಗೊಳಿಸಿದ್ದೇವೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.