ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿ, ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಬಿಜೆಪಿ ನಾಯಕರು ಕೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ತುಂಬುತ್ತಿದ್ದು, ಎನ್ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಮೊದಲು ಬಿಜೆಪಿ ಘೋಷಿಸಲಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸವಾಲು ಹಾಕಿದರು.
ಈ ವರ್ಷ ಸೆಪ್ಟೆಂಬರ್ 17 ಕ್ಕೆ ಮೋದಿ ಅವರಿಗೆ 75 ವರ್ಷ ತುಂಬುತ್ತದೆ. 75 ವರ್ಷದ ನಂತರ ಪಕ್ಷದ ನಾಯಕರು ನಿವೃತ್ತರಾಗಬೇಕು ಎಂದು ಮೋದಿಯವರೆ ನಿಯಮ ರೂಪಿಸಿದ್ದಾರೆ. ಅದರಂತೆ ಎಲ್. ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಸುಮಿತ್ರಾ ಮಹಾಜನ್, ಯಶವಂತ್ ಸಿನ್ಹಾ ಅವರನ್ನು ನಿವೃತ್ತಿಗೊಳಿಸಿದ್ದಾರೆ. ಇದೀಗ ಪ್ರಧಾನಿ ಪ್ರಧಾನಿ ಮೋದಿಯವರ ಸರದಿ. ಹಾಗಾದರೆ ಎನ್ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು? ಎಂದು ಕೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಮೊದಲು ಮುಖ್ಯಮಂತ್ರಿ ಸ್ಥಾನದಿಂದ ಯೋಗಿ ಆದಿತ್ಯನಾಥ ಅವರನ್ನು ಕಿತ್ತೊಗೆದು ನಂತರ ಅಮಿತ್ ಶಾ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುತ್ತಾರೆ. ಪ್ರಧಾನಿ ಮೋದಿಯವರು ಅಮಿತ್ ಶಾ ಪರ ಮತ ಕೇಳುತ್ತಿದ್ದಾರೆ. ಮೋದಿಯವರ ಭರವಸೆಯನ್ನು ಅಮಿತ್ ಶಾ ಈಡೇರಿಸುತ್ತಾರಾ? ಎಂದು ಕೇಳಿದರು.