ಕೋಲ್ಕತ್ತಾದ ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಆಸ್ಪತ್ರೆ ಮತ್ತು ಸ್ಥಳೀಯ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಕರಣದ ನಿರ್ವಹಣೆಯನ್ನು ಟೀಕಿಸಿದ ರಾಹುಲ್ ಗಾಂಧಿ, ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಯಲ್ಲಿನ ಸುರಕ್ಷತಾ ಕ್ರಮಗಳನ್ನು ಪ್ರಶ್ನಿಸಿದ್ದಾರೆ. ಕೋಲ್ಕತ್ತಾದಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಭೀಕರ ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಅತ್ಯಂತ ಕ್ರೂರ ಮತ್ತು ಅಮಾನವೀಯ ಕೃತ್ಯ ವೈದ್ಯ ಸಮುದಾಯ ಮತ್ತು ಮಹಿಳೆಯರಲ್ಲಿ ಅಭದ್ರತೆಯ ವಾತಾವರಣವನ್ನು ಸೃಷ್ಟಿಸಿದೆ.
ಸಂತ್ರಸ್ತೆಗೆ ನ್ಯಾಯ ಒದಗಿಸುವ ಬದಲು ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿರುವುದು ಆಸ್ಪತ್ರೆ ಮತ್ತು ಸ್ಥಳೀಯ ಆಡಳಿತದ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ರಾಹುಲ್ ಗಾಂಧಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
“ವೈದ್ಯಕೀಯ ಕಾಲೇಜಿನಂತಹ ಸ್ಥಳದಲ್ಲಿ ವೈದ್ಯರು ಸುರಕ್ಷಿತವಾಗಿಲ್ಲದಿದ್ದರೆ, ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಅಧ್ಯಯನಕ್ಕಾಗಿ ಹೊರಗೆ ಕಳುಹಿಸುವುದು ಹೇಗೆ ಎಂದು ಯೋಚಿಸಬೇಕಾಗಿದೆ? ನಿರ್ಭಯಾ ಪ್ರಕರಣದ ನಂತರ ಜಾರಿಗೆ ತಂದ ಕಟ್ಟುನಿಟ್ಟಿನ ಕಾನೂನುಗಳು ಇಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ಏಕೆ ವಿಫಲವಾಗಿವೆ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.