ಸುಧಾರಣೆ, ಕಾರ್ಯಕ್ಷಮತೆ ಮತ್ತು ರೂಪಾಂತರವು ಭಾರತವನ್ನು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ದೇಶವನ್ನಾಗಿ ಮಾಡಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
18ನೇ ಲೋಕಸಭೆಯ ಅಧಿವೇಶನದ 4ನೇ ದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದರು. ಇದು ಕೇಂದ್ರದಲ್ಲಿ 3ನೇ ಬಾರಿಗೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರಚನೆಯಾದ ನಂತರದ ಮುರ್ಮು ಅವರ ಮೊದಲ ರಾಷ್ಟ್ರಪತಿ ಭಾಷಣವಾಗಿದೆ.
ಸಂಸತ್ತಿಗೆ ಆಗಮಿಸಿದ ಅವರನ್ನು ಉಪ ರಾಷ್ಟ್ರಪತಿ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು.
ಲೋಕಸಭೆಗೆ ನೂತನವಾಗಿ ಆಯ್ಕೆಯಾದ ಸ್ಪೀಕರ್ ಓಂ ಬಿರ್ಲಾ ಅವರನ್ನು ಅಭಿನಂದಿಸುವುದರ ಮೂಲಕ ರಾಷ್ಟ್ರಪತಿಯವರು ತಮ್ಮ ಭಾಷಣವನ್ನು ಆರಂಭಿಸಿದರು. ಲೋಕಸಭೆ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ ಚುನಾವಣಾ ಆಯೋಗವನ್ನು ಅಭಿನಂದಿಸಿದರು. ಹೊಸದಾಗಿ ರಚನೆಯಾದ ಲೋಕಸಭೆಯ ಎಲ್ಲಾ ಚುನಾಯಿತ ಸದಸ್ಯರಿಗೆ ಅಭಿನಂದನೆ ಮತ್ತು ಶುಭಾಶಯಗಳನ್ನು ತಿಳಿಸಿದರು.
ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಎನ್ಡಿಎ ಸರ್ಕಾರದ ಆಡಳಿತದ ಮೇಲೆ ಜನರು ವಿಶ್ವಾಸ ಹೊಂದಿದ್ದಾರೆ. ಆರು ದಶಕಗಳ ನಂತರ ಮೂರನೇ ಬಾರಿಗೆ ಮೈತ್ರಿ ಸರ್ಕಾರವನ್ನು ಅಧಿಕಾರಕ್ಕೆ ತಂದಿರುವ ಜನರ ಪ್ರೀತಿ, ವಿಶ್ವಾಸವನ್ನು ಇದು ತೋರಿಸುತ್ತದೆ. ಭಾರತದ ಜನರು ತಮ್ಮ ಆಕಾಂಕ್ಷೆಗಳನ್ನು ನಮ್ಮ ಸರ್ಕಾರ ಮಾತ್ರ ಈಡೇರಿಸಬಲ್ಲದು ಎಂಬ ವಿಶ್ವಾಸ ಹೊಂದಿದ್ದಾರೆ ಎಂದರು.