ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜೈಲಿನಿಂದ ಹೊರಬಂದ ನಂತರ ಎಎಪಿ ನಾಯಕ ಮತ್ತು ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶನಿವಾರ ರಾಜ್ಘಾಟ್ ಸ್ಮಾರಕದಲ್ಲಿ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕನ್ನಾಟ್ ಪ್ಲೇಸ್ನಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಅವರು ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಸಂಸದ ಸಂಜಯ್ ಸಿಂಗ್ ಮತ್ತು ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಸೇರಿದಂತೆ ಹಲವು ಆಮ್ ಆದ್ಮಿ ಪಕ್ಷದ ನಾಯಕರು ಸಿಸೋಡಿಯಾ ಜೊತೆಗಿದ್ದರು.
ಆಪಾದಿತ ಮದ್ಯ ನೀತಿ “ಹಗರಣ” ಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸಿಸೋಡಿಯಾ ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ವಿಚಾರಣೆಯಿಲ್ಲದೆ 17 ತಿಂಗಳುಗಳ ಸುದೀರ್ಘ ಸೆರೆವಾಸವು ತ್ವರಿತ ನ್ಯಾಯದ ಹಕ್ಕನ್ನು ವಂಚಿತಗೊಳಿಸಿದೆ ಎಂದು ಹೇಳಿದೆ.