ಆಡಳಿತಾರೂಢ ಎನ್ಡಿಎ ಮೈತ್ರಿಕೂಟ ಮತ್ತು ಹೊಸ ಶಕ್ತಿಯೊಂದಿಗೆ ಸನ್ನದ್ಧವಾಗಿರುವ ಇಂಡಿಯಾ ಮೈತ್ರಿಕೂಟದ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗುವ ನಿರೀಕ್ಷೆ ಇರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಇಂದು ಚಾಲನೆ ಸಿಗಲಿದೆ. ಜು.22ರಿಂದ ಆ.12 ರವರೆಗೆ ಒಟ್ಟು 19 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷಾ ವರದಿ ಮಂಡಿಸಲಿದ್ದಾರೆ. ಜು.23ರ ಮಂಗಳವಾರ ನಿರ್ಮಲಾ ತಮ್ಮ ದಾಖಲೆಯ ಸತತ 7ನೇ ಬಜೆಟ್ ಮಂಡಿಸಲಿದ್ದಾರೆ.
ಭಾರೀ ವಾಕ್ಸಮರ: 19 ದಿನಗಳ ಅಧಿವೇಶನದ ವೇಳೆ ನೀಟ್, ನೆಟ್ ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮ, ಐಎಎಸ್ ಅಧಿಕಾರಿಗಳ ನೇಮಕದ ಗೊಂದಲ, ಅಗ್ನಿವೀರ ಯೋಜನೆಯ ನ್ಯೂನತೆ, ಮಣಿಪುರ ಹಿಂಸಾಚಾರ, ಬೆಲೆ ಏರಿಕೆ, ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉಗ್ರ ದಾಳಿ, ಉತ್ತರಪ್ರದೇಶದ ನಾಮಫಲಕ ವಿವಾದ ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಹಣಿಯಲು ವಿಪಕ್ಷಗಳು ಸಜ್ಜಾಗಿವೆ. 6 ಮಸೂದೆ: ಈ ಅಧಿವೇಶನದಲ್ಲಿ ಒಟ್ಟು ಆರು ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. 1934ರ ಏರ್ಕ್ರಾಫ್ಟ್ ಕಾಯ್ದೆಯನ್ನು ರದ್ದು ಪಡಿಸಿ ಹೊಸ ಕಾಯ್ದೆ ತರಲು ಭಾರತೀಯ ವಾಯುಯಾನ ವಿಧೇಯಕ ಮಂಡಿಸಲಾಗುತ್ತದೆ. ಹಾಗೆಯೇ, 2024ನೇ ಸಾಲಿನ ಹಣಕಾಸು ಮಸೂದೆ, ಸ್ವಾತಂತ್ರ್ಯ ಪೂರ್ವಕ್ಕಿಂತ ಹಳೆಯ ಕಾಯ್ದೆಯನ್ನು ಬದಲಿಸಲು ಬಾಕ್ಲರ್ಸ್ ಮಸೂದೆ, ಕಾಫಿ ಮಸೂದೆ, ರಬ್ಬರ್ ಮಸೂದೆ ಮತ್ತು ವಿಪತ್ತು ನಿರ್ವಹಣೆ ತಿದ್ದುಪಡಿ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯಲು ನಿರ್ಧರಿಸಲಾಗಿದೆ.