ದಸರಾ ಹಬ್ಬ ಮುಗಿತು. ಇನ್ನೇನು ಬೆಳಕಿನ ಹಬ್ಬ ದೀಪಾವಳಿ ಬರುತ್ತಿದೆ. ಹೀಗಾಗಿ ಜನರು ದೀಪಾವಳಿಯನ್ನು ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ದೀಪಾವಳಿ ಹಬ್ಬದ ವೇಳೆ ಆಹಾರ ಧಾನ್ಯ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಎಂಆರ್ ಪಿ ದರದಲ್ಲಿ ವಿತರಿಸಲು ಆಹಾರ ಧಾನ್ಯಗಳನ್ನು ವಿತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಎಂಆರ್ ಪಿ ದರದಲ್ಲಿ ಭಾರತ್ ಅಕ್ಕಿ, ಬೇಳೆ-ಕಾಳು ಪೂರೈಕೆಗೆ ಕ್ರಮ ಕೈಗೊಂಡಿದ್ದು, ಈ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆ ಹೊರೆ ತಗ್ಗಿಸಲು ಕ್ರಮ ಕೈಗೊಂಡಿದೆ.
ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಭಾರತ್ ಅಕ್ಕಿ, ಬೇಳೆ-ಕಾಳನ್ನು ವಾಹನಗಳ ಮೂಲಕ ವಿತರಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಡಿಮೆ ದರದಲ್ಲಿ ವಿತರಣೆಯಾಗುವ ಆಹಾರ ಧಾನ್ಯ ಪೂರೈಕೆ ವಾಹನಕ್ಕೆ ನವದೆಹಲಿಯ ಕೃಷಿ ಭವನದಲ್ಲಿ ಚಾಲನೆ ನೀಡಿದರು.
ದೆಹಲಿ/ಎನ್ಸಿಆರ್ ನಿವಾಸಿಗಳಿಗಾಗಿ ಭಾರತ್ ಕಡಲೆ ಬೇಳೆ ಕೆ.ಜಿಗೆ 70 ರೂ. ಭಾರತ್ ಹೆಸರುಬೇಳೆ ಕೆ.ಜಿಗೆ 107 ರೂ. ಭಾರತ್ ತೊಗರಿಬೇಳೆ ಕೆ.ಜಿಗೆ 89 ರೂ. ಬೆಲೆಯಲ್ಲಿ ಮಾರಟ ಮಾಡಲಾಗುತ್ತಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಇದೇ ವೇಳೆ ತಿಳಿಸಿದರು.
ಗ್ರಾಹಕ ವ್ಯವಹಾರಗಳ ಇಲಾಖೆ ನೇತೃತ್ವದಲ್ಲಿ ಕೈಗೊಂಡ ಈ ಯೋಜನೆ ನಾಗರಿಕರ ಮೇಲೆ ಹೆಚ್ಚುತ್ತಿರುವ ಆಹಾರ ಧಾನ್ಯ, ಬೇಳೆ-ಕಾಳು ಬೆಲೆ ಹೊರೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸಚಿವರಾದ ಬಿ.ಎಲ್. ವರ್ಮಾ ಹಾಗೂ ಶ್ರೀಮತಿ ನಿಮುಬೇನ್ ಬಂಭಾನಿಯಾ ಉಪಸ್ಥಿತರಿದ್ದರು.