ಲೋಕಸಭೆಯಲ್ಲಿ ಇಂದು ಅಬ್ಬರದ ಭಾಷಣ ಮಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನ ನಿರ್ಣಯದ ವೇಳೆ ಮಾತನಾಡಿದ ರಾಹುಲ್ ಗಾಂಧಿ ನರೇಂದ್ರ ಮೋದಿ ಎಂದರೆ ಹಿಂದೂ ಧರ್ಮವಲ್ಲ. ಬಿಜೆಪಿ, ಆರೆಸ್ಸೆಸ್ ಮಾತ್ರ ಹಿಂದೂ ಧರ್ಮವಲ್ಲ ಎಂದು ವಾಕ್ ಪ್ರಹಾರ ನಡೆಸಿದರು.
ಹಿಂದುತ್ವ ಎಂದರೆ ಭಯ, ದ್ವೇಷ, ಸುಳ್ಳುಗಳನ್ನ ಹರಡುವುದಲ್ಲ. ಎಲ್ಲಾ ಧರ್ಮಗಳು ಧೈರ್ಯದ ಬಗ್ಗೆ ಮಾತನಾಡುತ್ತವೆ. ಇಸ್ಲಾಂ, ಕ್ರೈಸ್ತ, ಬೌದ್ಧ, ಜೈನ ಹಾಗೂ ಸಿಖ್ ಧರ್ಮಗಳು ಧೈರ್ಯದ ಮಹತ್ವದ ಸಾರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು. ಈ ವೇಳೆ ಪ್ರಧಾನಿ ಮೋದಿ ಎದ್ದು ನಿಂತು ಆಕ್ಷೇಪ ವ್ಯಕ್ತ ಪಡಿಸಿದರು.
ಬಿಜೆಪಿಯು ಸಂವಿಧಾನ ಮತ್ತು ಭಾರತದ ಮೂಲಭೂತ ಕಲ್ಪನೆಯ ಮೇಲೆ ವ್ಯವಸ್ಥಿತ ದಾಳಿ ನಡೆಸುತ್ತಿದೆ. ಪ್ರಧಾನಿ ಮೋದಿಯವರ ಆದೇಶದಂತೆ ನನ್ನ ಮೇಲೆ ದಾಳಿ ನಡೆಸಲಾಯಿತು. ನನ್ನ ವಿರುದ್ಧ 20ಕ್ಕೂ ಹೆಚ್ಚು ಕೇಸ್ಗಳನ್ನ ಹಾಕಿಸಿದ್ದಾರೆ. ನನ್ನ ಮನೆಯನ್ನು ಕಿತ್ತುಕೊಳ್ಳಲಾಯಿತು. ಜಾರಿ ನಿರ್ದೇಶನಾಲಯ ನನ್ನನ್ನು 55 ಗಂಟೆಗಳ ಕಾಲ ವಿಚಾರಣೆ ನಡೆಸಿತು. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಸಂವಿಧಾನವನ್ನು ರಕ್ಷಿಸುವ ನನ್ನ ಪ್ರಯತ್ನದ ಹೆಮ್ಮೆ ಇದೆ ಎಂದು ರಾಹುಲ್ ಗಾಂಧಿ ಹೇಳಿದರು.