ಇಂದು ಆಗಸ್ಟ್ 20, ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 80ನೇ ವರ್ಷದ ಜಯಂತಿ. ಈ ಸಂದರ್ಭದಲ್ಲಿ ಅವರ ಪುತ್ರ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ದೆಹಲಿಯ ವೀರ ಭೂಮಿಯಲ್ಲಿರುವ ಅವರ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು.
ತಮ್ಮ ಎಕ್ಸ್ ಖಾತೆಯಲ್ಲಿ ಭಾವಪೂರ್ಣವಾಗಿ ನೆನೆಸಿಕೊಂಡಿರುವ ರಾಜೀವ್ ಗಾಂಧಿಯವರು, ತಂದೆಯವರು ದೇಹದ ರಕ್ತವನ್ನೆಲ್ಲ ಈ ಭೂಮಿಗೆ ಕುಡಿಯಲು ಕೊಟ್ಟರು. ನಾವು ದೇಶದ ಋಣಭಾರವನ್ನು ಹೊಂದಿ ಅದನ್ನು ತೀರಿಸಿದ್ದೇವೆ. ಭಾರತದ ಮಾಜಿ ಪ್ರಧಾನಿ, ಆಧುನಿಕ ಭಾರತದ ಸೃಷ್ಟಿಕರ್ತ, ಸಂವಹನ ಕ್ರಾಂತಿಯ ಪಿತಾಮಹ, ಭಾರತರತ್ನ ರಾಜೀವ್ ಗಾಂಧಿ ಅವರ ಜನ್ಮದಿನದಂದು ಅವರಿಗೆ ನಮನಗಳು ಎಂದು ಬರೆದುಕೊಂಡಿದ್ದಾರೆ.
ಅತಿ ಚಿಕ್ಕ ವಯಸ್ಸಿನಲ್ಲಿ ದೇಶದ ಪ್ರಧಾನಿಯಾದ ರಾಜೀವ್ ಗಾಂಧಿ ಆಡಳಿತದಲ್ಲಿ ತಂತ್ರಜ್ಞಾನ ಮತ್ತು ಆಧುನಿಕ ಚಿಂತನೆ ಅಳವಡಿಕೆಗೆ ಹೆಸರಾಗಿದ್ದರು. ತಮ್ಮ ಆಡಳಿತ ಸಂದರ್ಭದಲ್ಲಿ ಕೋಮು ಸೌಹಾರ್ದ, ರಾಷ್ಟ್ರೀಯ ಸಮಗ್ರತೆ ಮತ್ತು ತಾಂತ್ರಿಕ ಅತ್ಯಾಧುನಿಕತೆಗೆ ಒತ್ತು ನೀಡಿದ್ದರು.
ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದರ್ ಯಾದವ್ ನೇತೃತ್ವದಲ್ಲಿ ರಾಜೀವ್ ಗಾಂಧಿಯವರ ಜಯಂತಿಯನ್ನು ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.ದೇಶಾದ್ಯಂತ ಹಲವು ನಾಯಕರು ಮಾಜಿ ಪ್ರಧಾನಿಯನ್ನು ಸ್ಮರಿಸಿ ಗೌರವಿಸಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 80ನೇ ಜನ್ಮದಿನದ ಅಂಗವಾಗಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಭಾರತದ ಅತ್ಯಂತ ಕಿರಿಯ ಪ್ರಧಾನಿ, ಗಾಂಧಿಯವರು 1984 ರಿಂದ 1989 ರವರೆಗೆ ಅಧಿಕಾರದಲ್ಲಿದ್ದರು. ಅವರು 1991 ರಲ್ಲಿ ಎಲ್ಟಿಟಿಇಯ ಆತ್ಮಹತ್ಯಾ ಬಾಂಬರ್ನಿಂದ ಹತ್ಯೆಗೀಡಾದರು. “ನಮ್ಮ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ನಮನಗಳು” ಎಂದು ಪ್ರಧಾನಿ ಮೋದಿಯವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.