ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿಕಟವರ್ತಿ ಬಿಭವ್ ಕುಮಾರ್ ಅವರಿಗೆ ಸುಪ್ರೀಂಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಎಲ್ಲಾ ಪ್ರಮುಖ ಸಾಕ್ಷಿಗಳನ್ನು ವಿಚಾರಣೆ ಮಾಡುವವರೆಗೆ ಕುಮಾರ್ ಅವರು ಸಿಎಂ ಆಪ್ತ ಕಾರ್ಯದರ್ಶಿ ಹುದ್ದೆಯನ್ನು ಪುನರಾರಂಭಿಸದಂತೆ ಅಥವಾ ಸಿಎಂ ನಿವಾಸಕ್ಕೆ ಪ್ರವೇಶಿಸದಂತೆ ಸುಪ್ರೀಂಕೋರ್ಟ್ ನಿರ್ಬಂಧಿಸಿದೆ.
ಸಾಕ್ಷಿಗಳನ್ನು ಪರೀಕ್ಷಿಸುವವರೆಗೆ ಪ್ರಕರಣದ ವಿರುದ್ಧ ಮಾತನಾಡದಂತೆ ನ್ಯಾಯಾಲಯವು ಬಿಭವ್ ಕುಮಾರ್ ಗೆ ಹೇಳಿದೆ. ಈ ಪ್ರಕ್ರಿಯೆಯನ್ನು 3 ವಾರಗಳಲ್ಲಿ ಪೂರ್ಣಗೊಳಿಸಲು ನ್ಯಾಯಾಲಯವು ವಿಚಾರಣಾ ನ್ಯಾಯಾಲಯವನ್ನು ಕೇಳಿದೆ ಮತ್ತು ಯಾವುದೇ ಅಧಿಕೃತ ಸ್ಥಾನವನ್ನು ವಹಿಸಿಕೊಳ್ಳದಂತೆ ಕುಮಾರ್ ಅವರನ್ನು ನಿರ್ಬಂಧಿಸಿದೆ.
ಮೇ 18 ರಂದು ಬಂಧಿತರಾಗಿದ್ದ ಬಿಭವ್ ಕುಮಾರ್ಗೆ 100 ದಿನಗಳ ನಂತರ ಜಾಮೀನು ಸಿಕ್ಕಿದೆ. ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಮೇ 18 ರಂದು ಕೇಜ್ರಿವಾಲ್ ಅವರ ನಿವಾಸದಿಂದ ಕುಮಾರ್ ಅವರನ್ನು ಬಂಧಿಸಿದ್ದರು.
ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ಐಆರ್), ಕುಮಾರ್ ಯಾವುದೇ ಪ್ರಚೋದನೆಯಿಲ್ಲದೆ ತನ್ನ ಮೇಲೆ 7-8 ಬಾರಿ ಹಲ್ಲೆ ಮಾಡಿದ್ದಾನೆ. ನನ್ನ ಎದೆ ಮತ್ತು ಸೊಂಟಕ್ಕೆ ಒದ್ದು, ನಿಂದಿಸಿದ್ದಾನೆ. ಮೇ 13 ರಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಈ ಘಟನೆಯಲ್ಲಿ ತನ್ನ ಅಂಗಿಯನ್ನು ಎಳೆದು ಹಲ್ಲೆ ನಡೆಸಿರುವುದಾಗಿ ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ.
ಈ ಹಿಂದೆ, ಸ್ವಾತಿ ಮಲಿವಾಲ್ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ತನ್ನ ವಿರುದ್ಧ ಹಲ್ಲೆ ಆರೋಪಗಳನ್ನು ಮಾಡಿದ ನಂತರ ತನ್ನನ್ನು “ವಿಲನ್” ಮತ್ತು ಮುಖ್ಯಮಂತ್ರಿಯ ಆಪ್ತರನ್ನು “ಹೀರೋ” ಎಂದು ಬಿಂಬಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದರು.