ರಾಜ್ಯದಲ್ಲಿ ಡೆಂಘೀ ಸೋಂಕಿನ ಅಬ್ಬರ ಮುಂದುವರೆದಿದೆ. ಭಾನುವಾರವೂ 320 ಮಂದಿಗೆ ಡೆಂಘೀ ದೃಢಪಟ್ಟಿದ್ದು ಒಟ್ಟು ಡೆಂಘೀ ಪ್ರಕರಣ 17 ಸಾವಿರ ಗಡಿ ದಾಟಿದೆ. ನಿತ್ಯ ಸರಾಸರಿ 2,500 ಪರೀಕ್ಷೆ ನಡೆಸುತ್ತಿದ್ದ ಆರೋಗ್ಯ ಇಲಾಖೆಯು ಭಾನುವಾರ 1,630 ಮಂದಿಗೆ ಮಾತ್ರ ಪರೀಕ್ಷೆ ನಡೆಸಿದೆ. ಈ ಪೈಕಿ 320 ಮಂದಿಗೆ ಡೆಂಘೀ ಖಚಿತಪಟ್ಟಿದ್ದು, ಒಟ್ಟು ಡೆಂಘೀ ಪ್ರಕರಣಗಳ ಸಂಖ್ಯೆ 17,227ಕ್ಕೆ ಏರಿಕೆಯಾಗಿದೆ. ಭಾನುವಾರದ ಪ್ರಕರಣ ಸೇರಿ 3,004 ಮಂದಿ ಸಕ್ರಿಯ ಡೆಂಘೀ ರೋಗಿಗಳು ಚಿಕಿತ್ಸೆಯಲ್ಲಿದ್ದಾರೆ. ಈ ಪೈಕಿ 2,539 ಮಂದಿ ಮನೆಯಲ್ಲೇ ಚಿಕಿತ್ಸೆಯಲ್ಲಿದ್ದಾರೆ. 465 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ 9 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಬೆಂಗಳೂರು ನಗರದಲ್ಲಿ 142, ಬೆಳಗಾವಿ 21, ಹಾವೇರಿ, ದಾವಣಗೆರೆ ತಲಾ 17, ರಾಮನಗರ 15, ಕಲಬುರಗಿ 13 ಪ್ರಕರಣ ದೃಢಪಟ್ಟಿವೆ.