ಆಂಧ್ರದಲ್ಲಿ ಡಿಸಿಎಂ ಪವನ್ ಕಲ್ಯಾಣ್ ಫುಲ್ ಸುದ್ದಿಯಲ್ಲಿದ್ದಾರೆ . ಕೊಟ್ಟ ಮಾತು ಉಳಿಸಿಕೊಂಡ ಸತ್ಯ ಹರಿಶ್ಚಂದ್ರನಂತೆ ಜನಸೇನೆಯ ಸೇನಾಧಿಪತಿ ಮಿಂಚುತ್ತಿದ್ದಾರೆ. ಅಧಿಕಾರದಲ್ಲಿ ಅಂಧಾ ದರ್ಬಾರ್ ಮಾಡದೇ ಅಂದದ ಆಂಧ್ರ ಕಟ್ಟುವತ್ತ ಹೆಜ್ಜೆ ಇಟ್ಟಿದ್ದಾರೆ.
ಪವನ್ ಕಲ್ಯಾಣ್, ಆಂಧ್ರದಲ್ಲಿ ಮಾಸ್ ಡೈಲಾಗ್, ಖದರ್ ಌಕ್ಷನ್ ಪವರ್ಫುಲ್ ಌಟಿಟ್ಯೂಡ್ನಿಂದಾನೇ ಪವರ್ ಸ್ಟಾರ್ ಆದವರು. ಈಗ ಸಿನಿಮಾ ಅಧ್ಯಾಯಕ್ಕೆ ಅಲ್ಪ ವಿರಾಮ ಬಿದ್ದಿದೆ. ಪೊಲಿಟಿಕಲ್ ಅಧ್ಯಾಯ ಆರಂಭವಾಗಿದೆ. ಇಲ್ಲೂ ಮಾಸ್ ಡೈಲಾಗ್. ಖದರ್ ಌಕ್ಷನ್ ಇದೆ. ಇದರಿಂದಾಗಿ ರಾಜಕೀಯ ಅಖಾಡದಲ್ಲೂ ಪವರ್ ಸ್ಟಾರ್ ಪ್ರಜ್ವಲಿಸಲಾರಂಭಿಸಿದ್ದಾರೆ. ಪವನ್ ಕಲ್ಯಾಣ್ ಪೀಪಲ್ಸ್ ಕಲ್ಯಾಣಕ್ಕೆ ಪಣ ತೊಟ್ಟಿದ್ದಾರೆ. ಅಭಿವೃದ್ಧಿಯ ಹೆಜ್ಜೆ ಹಾಕಿದ್ದಾರೆ.
ಚುನಾವಣೆ ಪ್ರಚಾರದ ವೇಳೆ ಪ್ರಮಾಣ.. ಈಗ ಅದೇ ಸತ್ಯ!
ಅವು ಆಂಧ್ರದ ಮಾನ್ಯಂ ಪಾರ್ವತಿಪುರಂ ಜಿಲ್ಲೆಯಲ್ಲಿನ ಗ್ರಾಮಗಳು. ಈ ಗ್ರಾಮಗಳು ಅಂನಂತಗಿರಿ ಪರ್ವತ ಸಾಲಿನಲ್ಲಿ ಬರೋ ಬುಡಕಟ್ಟು ಜನಾಂಗ ವಾಸಿಸೋ ಜಾಗ. ಇದು ಎಂಥಾ ಜಾಗ ಅಂದ್ರೆ ಈ ಎಐ, ಯುಐ ಕಾಲದಲ್ಲೂ ಗೂಗಲ್ನಲ್ಲೂ ಕಾಣದಂತ ಕೆಲ ಗ್ರಾಮಗಳಿವೆ. ಈ ಗ್ರಾಮಗಳಿಗೀಗ ರಸ್ತೆ ಸೌಭಾಗ್ಯ ಸಿಕ್ತಿದೆ. ಇದಕ್ಕೆ ಕಾರಣ ಪವನ್ ಕಲ್ಯಾಣ್ ಧೃಢ ನಿಲುವು. ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಪವನ್ ಕಲ್ಯಾಣ್ ಬುಡಕಟ್ಟು ಸಮುದಾಯವೊಂದಕ್ಕೆ ರಸ್ತೆ ಮಾಡಿಸಿಕೊಡೋ ಭರವಸೆ ನೀಡಿದ್ರು. ಈ ಹಿಂದೆ ಎಷ್ಟೇ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದ್ರೆ ನಾವು ಅಧಿಕಾರಕ್ಕೆ ಬಂದ್ರೆ ರಸ್ತೆ ಮಾಡಿಸಿಕೊಡೋದಾಗಿ ಪವನ್ ಕಲ್ಯಾಣ್ ಭರವಸೆಯ ಬಾಣ ಬಿಟ್ಟಿದ್ರು. ಇದೀಗ ಅದೇ ಬಾಣವನ್ನ ಬೆನ್ನತ್ತಿ ಬಂದಿರೋ ಆಂಧ್ರ ಡಿಸಿಎಂ, ಕೊಟ್ಟ ಮಾತಿನಂತೆ ಮಳೆಯ ನಡುವೆಯೇ ರಸ್ತೆ ನಿರ್ಮಾಣದ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.
ಒಟ್ಟು ಮಾನ್ಯಂ ಪಾರ್ವತಿಪುರಂ ಜಿಲ್ಲೆಯ 19 ರೋಡ್ಗಳ ನಿರ್ಮಾಣಕ್ಕೆ 36.71 ಕೋಟಿ ರೂಪಾಯಿಯ ಯೋಜನೆಗೆ ಚಾಲನೆ ಸಿಕ್ಕಿದೆ. ಕೇವಲ ರಸ್ತೆ ಸಂಪರ್ಕ ಮಾತ್ರವಲ್ಲದೇ ಆರೋಗ್ಯ ಸೌಲಭ್ಯ ಕಲ್ಪಿಸಲು ಆಸ್ಪತ್ರೆ ನಿರ್ಮಾಣ ಸೇರಿ ಹಲವು ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. ನನಗೆ ಎದೆ ತಟ್ಟಿ ಡೈಲಾಗ್ ಹೇಳೋದು ಗೊತ್ತು. ಕೆಲಸ ಮಾಡಿ ತೋರಿಸೋದು ಗೊತ್ತು ಅನ್ನೋ ಕಹಳೆ ಮೊಳಗಿಸಿದ್ದಾರೆ. ನಿಮ್ಮ ಜೀವನದ ಜವಾಬ್ದಾರಿಯನ್ನ ನೀವು ತೆಗೆದುಕೊಳ್ಳದೇ ಹೋದ್ರೆ ಯಾವತ್ತೂ ಉದ್ಧಾರ ಆಗಲ್ಲ. ನೀವೂ ಮುಂದಕ್ಕೂ ಹೋಗೋದಿಲ್ಲ. ಮಾತಾಡಿದ್ರೆ ಅಣ್ಣಾ ಮೀಸೆ ತಿರುಗಿಸು.. ಮೀಸೆ ತಿರುಗಿಸು ಅಂತೀರಾ.. ನಾನು ಮೀಸೆ ತಿರುಗಿಸಿದ್ರೆ ನಿಮ್ಗೆ ರೋಡ್ಗಳು ಆಗುತ್ವಾ? ನಾನು ಚಾಟಿಯಲ್ಲಿ ಹೊಡ್ಕಂಡ್ರೆ ನಿಮ್ಗೆ ರೋಡ್ ಆಗಲ್ಲ. ನಾನು ಹೋಗಿ ಪ್ರಧಾನಿಯವರಿಗೆ ಕೈ ಮುಗಿದು, ಸಿಎಂ ಗಮನಕ್ಕೆ ಸಮಸ್ಯೆ ತೆಗೆದುಕೊಂಡು ಹೋದ್ರಷ್ಟೇ ರಸ್ತೆ ಆಗುತ್ತೆ. ಮೀಸೆ ತಿರುಗಿಸೋದು, ಹಿಂಗೆ ಹೊಡ್ಕೊಳೋದು ನನಗಾಗಲ್ಲ. ಕೆಲಸ ಮಾಡೋಕೆ ಗೊತ್ತು. ಕೆಲಸ ಮಾಡು ಅಂತಾ ಹೇಳಿ.
ಪವರ್ ಡೈಲಾಗ್ಗಳ ಸ್ಟಾರ್. ಕತ್ತಲೆಯಲ್ಲಿರೋ ಜನಗಳಿಗೆ ಬೆಳಕು ಕೊಡೋ ಸ್ಟಾರ್ ಆಗುವತ್ತ ಹೆಜ್ಜೆ ಇಡುತ್ತಿದ್ದಾರೆ. ಶಂಕು ಸ್ಥಾಪನೆ ಆದಷ್ಟೇ ವೇಗವಾಗಿ ರಸ್ತೆಯೂ ಆದರೆ, ಈ ಬುಡಕಟ್ಟು ಜನಾಂಗದ ಸಂತೋಷದ ಸೀಮೆಯನ್ನು ಅಕ್ಷರಗಳಲ್ಲಿ ಅಳೆಯಲು ಆಗೋದಿಲ್ಲ.