ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ : ಓರ್ವ ಬಾಲಕಿ ಸಾವು
10 ದಿನಗಳಲ್ಲಿ ಬರೋಬ್ಬರಿ 1,026 ಡೆಂಗ್ಯೂ ಕೇಸ್
ರಾಜ್ಯದಲ್ಲಿ ಮಳೆ ಆರ್ಭಟ ಜೊತೆಗೆ ಸಾಂಕ್ರಾಮಿಕ ರೋಗಗಳೂ ತೀವ್ರವಾಗಿ ಉಲ್ಬಣಗೊಳ್ಳುತ್ತಿವೆ. ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಚಿಕುನ್ಗುನ್ಯಾ ಕಾಯಿಲೆ ಹರಡುತ್ತಿವೆ. ಜನ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಇದೀಗ ಧಾರವಾಡ ಜಿಲ್ಲೆಯಲ್ಲಿ ಡೆಂಗ್ಯೂವಿನಿಂದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಇದರಿಂದಾಗಿ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ಮತ್ತೊಂದೆಡೆ, ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಗರಾಜ್ ಎಂಬವರು ಗುರುವಾರ ಮೃತಪಟ್ಟಿದ್ದರು. ಇದೂ ಸಹ ಡೆಂಗ್ಯೂವಿನಿಂದಲೇ ಎಂಬ ಅನುಮಾನ ಸೃಷ್ಟಿಯಾಗಿದೆ.
ರಾಜ್ಯದಲ್ಲಿ ಪ್ರಸಕ್ತ ವರ್ಷ 4,414 ಡೆಂಗ್ಯೂ, 778 ಚಿಕುನ್ಗುನ್ಯಾ ಪ್ರಕರಣಗಳು ಪತ್ತೆ ಆಗಿವೆ. ಈ ನಡುವೆ ಕಳೆದ 10 ದಿನಗಳಲ್ಲಿ ಬರೋಬ್ಬರಿ 1,026 ಡೆಂಗ್ಯೂ, 137 ಚಿಕೂನ್ ಗುನ್ಯಾ ಪಾಸಿಟಿವ್ ಬಂದಿದ್ದು ಆತಂಕ ಮೂಡಿಸಿದೆ. ಚಿಕೂನ್ಗುನ್ಯಾಕ್ಕಿಂತ ಡೆಂಗ್ಯೂ ಹಾವಳಿಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.