ಎ- ಖಾತಾ, ಬಿ – ಖಾತಾ ಎನ್ನುವ ಮಾತನ್ನು ನೀವು ಕೇಳಿಯೇ ಇರುತ್ತೀರಿ. ಆದರೆ, ಎ- ಖಾತಾ ಎಂದರೇನು, ಬಿ – ಖಾತಾ ಎಂದರೇನು ಹಾಗೂ ಎ – ಖಾತಾ ಹಾಗೂ ಬಿ – ಖಾತಾಗಳ ನಡುವಿನ ವ್ಯತ್ಯಾಸವೇನು. ಎ – ಖಾತಾಗೆ ಸಿಗುವ ಮಾನ್ಯತೆ ಹಾಗೂ ಬಿ – ಖಾತೆಗೆ ಸಿಗುವ ಮಾನ್ಯತೆ ಏನು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ. ಹೀಗಾಗಿ, ಎ- ಖಾತಾ, ಬಿ -ಖಾತಾ ವ್ಯತ್ಯಾಸ ಸೇರಿದಂತೆ ಖಾತೆಗಳ ವ್ಯತ್ಯಾಸ ಹಾಗೂ ಅದರಿಂದ ಆಗುವ ಉಪಯೋಗಗಳ ಮಾಹಿತಿ ಇಲ್ಲಿದೆ.
ಆಸ್ತಿ ಖರೀದಿ ಮಾಡುವುದು ಮಾತ್ರವಲ್ಲ. ಆಸ್ತಿ ಖರೀದಿಯಲ್ಲಿ ಯಾವ ಖಾತಾ ಇದೆ ಎಂದು ನೋಡಿಕೊಳ್ಳುವುದು ಸಹ ಅತ್ಯಂತ ಅವಶ್ಯವಾಗಿ ಇರುತ್ತದೆ. ಸಾಮಾನ್ಯವಾಗಿ ಆಸ್ತಿಯ ದಾಖಲೆ ಪತ್ರಗಳಲ್ಲಿ ಎಯಿಂದ ಇ ವರೆಗೂ ಇರುತ್ತವೆ (ಎ,ಬಿ,ಸಿ,ಡಿ,ಇ) ಈ ಖಾತಾ ಅಡಿಯಲ್ಲಿ ಮುಖ್ಯವಾಗಿ ಎ-ಖಾತಾ ಹಾಗೂ ಬಿ-ಖಾತಾಗಳು ಇವೆ. ನೀವು ನಿಮ್ಮ ಆಸ್ತಿಯ ದಾಖಲೆ ಪತ್ರದಲ್ಲಿ ನಮೂದಿಸಲಾಗಿರುವ ಖಾತಾಗಳ ವಿವರದ ಬಗ್ಗೆ ಮೊದಲೇ ತಿಳಿದುಕೊಂಡಿದ್ದರೆ, ಮುಂದಿನ ದಿನಗಳಲ್ಲಿ ಆಸ್ತಿಯ ವಿಚಾರದಲ್ಲಿ ಎದರುಗಾಗಬಹುದಾದ ಮತ್ತು ಎದುರಾಗುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಎ- ಖಾತಾ ಹಾಗೂ ಬಿ-ಖಾತಾ ನಡುವಿನ ವ್ಯತ್ಯಾಸವೇನು ?
ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು ಸುಲಭಾಗಿಸುವ ಉದ್ದೇಶದಿಂದ ಎ – ಖಾತಾ ಹಾಗೂ ಬಿ – ಖಾತಾ ಎನ್ನುವ ವಿಂಗಡಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) 2007ರಲ್ಲಿ ಪರಿಚಯಿಸಿತ್ತು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ, ಎ ಖಾತಾದಡಿಯಲ್ಲಿ ಬರುವ ಆಸ್ತಿಯು ಸಂಪೂ ಕಾನೂನು ಬದ್ಧವಾಗಿರುತ್ತದೆ. ಇನ್ನು ಬಿ-ಖಾತಾದಲ್ಲಿ ಬರುವ ಆಸ್ತಿಯು ಅರೆ ಕಾನೂನು ಇಲ್ಲವೇ ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕಾಗಿಯೇ ಬಿ – ಖಾತಾಗಿಂತಲೂ ಎ- ಖಾತಾಗೆ ಬೇಡಿಕೆಯೂ ಹೆಚ್ಚು ಹಾಗೂ ಕಾನೂನಿನ ಮಾನ್ಯತೆಯೂ ಹೆಚ್ಚು.
ಎ -ಖಾತಾಗೆ ಹಲವು ಸೌಲಭ್ಯ: ಎ -ಖಾತಾ ಆಸ್ತಿಯನ್ನು ಕಾನೂನು ಬದ್ಧ ಎಂದು ಹೇಳಲಾಗುತ್ತದೆ. ಈ ರೀತಿ ಖಾತೆಯನ್ನು ಅಂದರೆ ಎ – ಖಾತೆಯನ್ನು ಹೊಂದಿದ್ದರೆ, ಆ ಆಸ್ತಿಯ ದಾಖಲಾತಿ ಪತ್ರವು ಸಂಪೂರ್ಣವಾಗಿ ಕಾನೂನು ಬದ್ಧ ಎಂದು ಮಾನ್ಯ ಮಾಡಲಾಗುತ್ತದೆ. ಈ ಖಾತಾದಡಿ ಬರುವ ಆಸ್ತಿಗಳು ಸರ್ಕಾರದ ನಿಯಮಗಳನುಸಾರವಾಗಿದೆ. ಎಲ್ಲ ನಿಯಮಗಳನ್ನು ಪಾಲಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.
ಎ-ಖಾತಾ ಇದ್ದರೆ ಆಸ್ತಿ ಸಂಬಂಧಿಸಿದಂತೆ ವ್ಯಾಪಾರ ಪರವಾನಿಗೆ, ಕಟ್ಟಡಗಳ ನಿರ್ಮಾಣ ಮಾಡುವುದಕ್ಕೆ ಬೇಕಾದ ಪರವಾನಿಗೆ, ಕಟ್ಟಡ ಯೋಜನೆಗೆ ಸಂಬಂಧಿಸಿದ ಅನುಮೋದನೆ ಹಾಗೂ ಬ್ಯಾಂಕ್ಗಳಿಂದ ಸಾಲ ಸೇರಿದಂತೆ ಹಲವು ಮಾದರಿಯ ಸರ್ಕಾರಿ ಸೌಲಭ್ಯಗಳು ಸಿಗಲಿವೆ.
ಬಿ – ಖಾತಾಗೆ ಸಿಗುವ ಸೌಲಭ್ಯವೇನು: ಬಿ – ಖಾತಾದಾರರಿಗೆ ಎ- ಖಾತಾದಾರರಂತೆ ಹೆಚ್ಚಿನ ಸೌಲಭ್ಯ ಸಿಗುವುದಿಲ್ಲ. ಆಸ್ತಿಯು ಬಿ-ಖಾತಾ ದಾಖಲೆ ಪತ್ರಗಳ ಅಡಿಯಲ್ಲಿ ಇದ್ದರೆ, ಅದನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ. ಬಿ – ಖಾತಾದಲ್ಲಿ ಸರ್ಕಾರಿ ನಿಯಮಗಳ ಉಲ್ಲಂಘನೆಯಾಗಿರುತ್ತದೆ. ಪ್ರಮುಖವಾಗಿ ಬಿ – ಖಾತಾದಲ್ಲಿ ಅನಧಿಕೃತ ವಿನ್ಯಾಸಗಳು, ಪೂರ್ಣವಾಗದ ರಚನೆ ಹಾಗೂ ನಿಯಮ ಉಲ್ಲಂಘನೆ ಮಾಡಿ ಕಟ್ಟಡದ ನಿರ್ಮಣ ಸೇರಿದಂತೆ ಹಲವು ಅಂಶಗಳು ಇರಲಿವೆ.
ಇನ್ನು ಬಿ-ಖಾತಾ ಆಸ್ತಿ ಇದ್ದರೂ ಸರ್ಕಾರದ ಪರವಾನಿಗೆ, ಬ್ಯಾಂಕ್ ಸಾಲಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಿದೆ. ಆದರೆ, ಆಸ್ತಿ ಮಾಲೀಕತ್ವವನ್ನು ಮರುಮಾರಾಟ ಮಾಡಲು ಇಲ್ಲವೇ ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಹಕ್ಕು ಬಿ – ಖಾತೆಯನ್ನು ಹೊಂದಿರುವವರಿಗೆ ಇರುವುದಿಲ್ಲ ಎನ್ನುತ್ತದೆ ಬಿಬಿಎಂಪಿಯ ನಿಯಮ.
ಎ – ಖಾತಾ ಇರುವವರಿಗೆ ಸಿಗುವ ಸೌಲಭ್ಯಗಳು ಎ- ಖಾತಾ ಹೊಂದಿರುವವರಿಗೆ ಹಲವು ಕಾನೂನಿ ಸೌಲಭ್ಯಗಳು ಸಿಗುತ್ತವೆ. ಮುಖ್ಯವಾಗಿ ನಿಮ್ಮ ಆಸ್ತಿಯನ್ನು ಬಿಬಿಎಂಪಿಯು ಕಾನೂನು ಬದ್ಧ ಎಂದು ಪರಿಗಣಿಸುತ್ತದೆ. ಸಾಲವನ್ನು ಪಡೆದುಕೊಳ್ಳಲು ನೀವು ಯಾವುದೇ ಬ್ಯಾಂಕ್ನಲ್ಲಾದರೂ ಅತ್ಯಂತ ಸರಳವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೀರು, ಒಳಚರಂಡಿ ಹಾಗೂ ವಿದ್ಯುತ್ ಸೇವೆ ಸೇರಿದಂತೆ ಮೂಲಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ನೀವು ಅರ್ಹರಾಗಿರುತ್ತೀರಿ. ಅಲ್ಲದೇ ಈ ಆಸ್ತಿಯಿಂದ ನೀವೇನಾದರೂ, ವ್ಯಾಪಾರಕ್ಕೆ ಸಂಬಂಧಿಸಿದ ಪರವಾನಿಗೆಯನ್ನು ಪಡೆಯಲು ಇಚ್ಛಿಸಿದರೆ, ಆ ಪರವಾನಿಗೆಯೂ ಸಹ ನಿಮಗೆ ಸಿಗುತ್ತದೆ.
ಬಿ – ಖಾತಾ ಸಮಸ್ಯೆ ತಪ್ಪಿಸಲು ಏನು ಮಾಡಬೇಕು ಬಿ – ಖಾತಾವನ್ನು ಹೊಂದಿದ್ದರೆ, ನಿಮ್ಮ ಆಸ್ತಿ ಪ್ರಯೋಜನಕ್ಕೆ ಇಲ್ಲ. ಈ ಆಸ್ತಿಯಿಂದ ತೊಂದರೆ ಎಂದು ಭಾವಿಸಬೇಡಿ. ಬಿ – ಖಾತಾದ ಕೆಲವು ನಿರ್ದಿಷ್ಟ ಸಮಸ್ಯೆಗಳನ್ನು ಸಹ ನೀವು ಬಗೆಹರಿಸಿಕೊಳ್ಳಬಹುದಾಗಿದೆ. ಈಗಾಗಲೇ ನೀವು ಬಿ – ಖಾತಾದ ಅಡಿಯಲ್ಲಿ ಆಸ್ತಿಯನ್ನು ಹೊಂದಿದ್ದೀರಿ ಎಂದಾರೆ, ಮೊದಲು ಅದನ್ನು ಎ-ಖಾತಾಗೆ ಬದಲಾಯಿಸಿ(ಪರಿವರ್ತನೆ) ಕೊಳ್ಳಬೇಕು. ಒಂದೊಮ್ಮೆ ನೀವು ಎ-ಖಾತಾಗೆ ಪರಿವರ್ತಿಸಿಕೊಳ್ಳದಿದ್ದರೆ ಸಮಸ್ಯೆ ಆಗಲಿದೆ. ಅಲ್ಲದೇ ಸರ್ಕಾರ ಹಾಗೂ ವಿವಿಧ ಸಂಸ್ಥೆಗಳಿಂದ ಸಿಗುವ ಸೌಲಭ್ಯವು ನಿಮಗೆ ಸಿಗುವುದಿಲ್ಲ.