‘ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆಗೆ ಶುಕ್ರವಾರ ನುಗ್ಗಿದ್ದ ದರೋಡೆಕೋರರು ದೋಚಿದ್ದು ₹ 11 ಲಕ್ಷ ನಗದು ಹಾಗೂ ಅಂದಾಜು ₹ 14 ಕೋಟಿ ಮೌಲ್ಯದ ಚಿನ್ನಾಭರಣ ಎಂಬುದು ಪರಿಶೀಲನೆ ವೇಳೆ ಗೊತ್ತಾಗಿದೆ.
ಕಳವಾದ ಚಿನ್ನಾಭರಣಗಳ ಬಗ್ಗೆ ಕೂಲಂಕಷವಾಗಿ ಶನಿವಾರ ಪರಿಶೀಲಿಸಿದಾಗ ಇಷ್ಟೊಂದು ಮೊತ್ತದ ನಗ–ನಗದು ಕಳವಾಗಿದ್ದು ಗೊತ್ತಾಗಿದೆ ಎಂದು ಹೇಳಿದರು. ‘ಚಿನ್ನ ಅಡವಿಟ್ಟವರು ಅದರ ಮೌಲ್ಯದ ಶೇ 80ರಷ್ಟು ಮೊತ್ತವನ್ನು ಸಾಲವಾಗಿ ಪಡೆದಿರುತ್ತಾರೆ. ಶೇ 20ರಷ್ಟು ಮೊತ್ತವನ್ನು ಅವರಿಗೆ ಮರಳಿಸಬೇಕಾಗುತ್ತದೆ. ಅಡಮಾನವಾಗಿ ಪಡೆದ ಚಿನ್ನಾಭರಣಗಳಿಗೆ ₹ 19 ಕೋಟಿ ಮೌಲ್ಯದ ವಿಮೆಯನ್ನು ಮಾಡಿಸಿದ್ದೇವೆ. ನಾವು ಗ್ರಾಹಕರಿಗೆ ಸೇರಬೇಕಾದ ಹಣವನ್ನು ಮರಳಿಸುತ್ತೇವೆ‘ ಎಂದು ಮಾಹಿತಿ ನೀಡಿದರು. ಸಂಘದ ಈ ಶಾಖೆ ಸ್ಥಾಪನೆಯಾಗಿ ಸುಮಾರು 14 ವರ್ಷಗಳಾಗಿವೆ. ಕೆಲವರು ಸಾಲವನ್ನು ಪ್ರತಿ ವರ್ಷವೂ ನವೀಕರಿಸುತ್ತಿದ್ದರು‘ ಎಂದರು.
ಎರಡು ಕಾರು ಬಳಕೆ: ದರೋಡೆ ಕೃತ್ಯಕ್ಕೆ ದರೋಡೆಕೋರರು ನಕಲಿ ನಂಬರ್ ಪ್ಲೇಟ್ನ ಎರಡು ಕಾರುಗಳನ್ನು ಬಳಸಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಕಾರುಗಳಲ್ಲಿ ಒಂದು ಕಾರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲಪಾಡಿ ಟೋಲ್ಗೇಟ್ ಮೂಲಕ ಕೇರಳದತ್ತ ಸಾಗಿದ್ದರೆ, ಇನ್ನೊಂದು ಕಾರು ಮಂಗಳೂರಿನತ್ತ ಸಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೇ ನಿಮಿಷದಲ್ಲಿ ಕೃತ್ಯ: ‘ದರೋಡೆಕೋರರು ಐದಾರು ನಿಮಿಷಗಳಲ್ಲಿ ಕೃತ್ಯವನ್ನು ಹೇಗೆ ಪೂರ್ಣಗೊಳಿಸಬೇಕು ಎಂಬ ಬಗ್ಗೆ ಮೊದಲೇ ಯೋಜನೆ ರೂಪಿಸಿಕೊಂಡು ಬಂದಿದ್ದಾರೆ. ಸದಾ ಜನನಿಬಿಡವಾಗಿರುವ ಕೆ.ಸಿ.ರೋಡ್ನಲ್ಲಿ ಶುಕ್ರವಾರ ಮಧ್ಯಾಹ್ನ ಜನರ ಓಡಾಟ ಕಡಿಮೆ ಇರುತ್ತದೆ. ಇಲ್ಲಿನ ಬಹುತೇಕ ಅಂಗಡಿಗಳ ಮಾಲೀಕರು ಮುಸ್ಲಿಮರಿದ್ದು. ಅವರು ಶುಕ್ರವಾರ ಮಧ್ಯಾಹ್ನ ವೇಳೆ ನಮಾಜ್ಗೆ ತೆರಳುವ ಸಂದರ್ಭ ನೋಡಿಕೊಂಡು ಕೃತ್ಯ ನಡೆಸಿದ್ದಾರೆ. ಮಧ್ಯಾಹ್ನ 1 ಗಂಟೆ 09 ನಿಮಿಷಕ್ಕೆ ಸಹಕಾರಿ ಸಂಘದ ಕಚೇರಿ ಬಳಿ ಕಾರು ನಿಲ್ಲಿಸಿರುವ ದರೋಡೆಕೋರರು, 1 ಗಂಟೆ 15 ನಿಮಿಷದ ಒಳಗೆ ಎಷ್ಟು ಸಾಧ್ಯವಾಗುತ್ತದೋ, ಅಷ್ಟು ನಗ–ನಗದು ತುಂಬಿಕೊಂಡು ಪರಾರಿಯಾಗಿದ್ದಾರೆ. ದರೋಡೆಗೆ ಬಳಸಿದ್ದ ಕಾರು ಮಧ್ಯಾಹ್ನ 1 ಗಂಟೆ 20 ನಿಮಿಷಕ್ಕೆ ತಲಪಾಡಿಯ ಟೋಲ್ಗೇಟ್ ಮೂಲಕ ಹಾದುಹೋಗಿದೆ‘ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಐವರ ತಂಡ ದರೋಡೆಯಲ್ಲಿ ಭಾಗಿಯಾಗಿತ್ತು. ಆದರೆ, ಕೃತ್ಯಕ್ಕೆ ಬಳಸಿದ ಕಾರು ತಲಪಾಡಿ ಟೋಲ್ಗೇಟ್ ಮೂಲಕ ಹಾದುಹೋಗುವಾಗ ಅದರಲ್ಲಿ ಚಾಲಕ ಮತ್ತು ಹಿಂಬದಿಯ ಸೀಟಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಇದ್ದರು. ಚಾಲಕ ಮಾಸ್ಕ್ ಧರಿಸಿ ಟೋಲ್ನಲ್ಲಿ ಹಣ ಪಾವತಿಸಿದ್ದ. ಈ ದೃಶ್ಯ ಟೋಲ್ಗೇಟ್ ಬಳಿಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದಾಖಲಾಗಿವೆ.
ಈ ಕಾರು ಹೊಸಂಗಡಿಯವರೆಗೆ ಸಾಗಿದ್ದು, ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 66ರಿಂದ ಎಡಕ್ಕೆ ತಿರುಗಿ ಇನ್ನೊಂದು ರಸ್ತೆಯಲ್ಲಿ ಸಾಗಿರುವುದು ತನಿಖೆಯಿಂದ ಗೊತ್ತಾಗಿದೆ. ದರೋಡೆಯಲ್ಲಿ ಭಾಗಿಯಾದ ಇತರರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆ.ಸಿ.ರೋಡ್ನಿಂದ ತಲಪಾಡಿವರೆಗೆ ಸಾಗಿ, ಸಿ.ಸಿ.ಟಿ.ವಿ ಕಣ್ಣಾವಲು ಇಲ್ಲದ ಕಡೆ ಇನ್ನೊಂದು ಕಾರು ಹತ್ತಿ, ಕದ್ದ ಚಿನ್ನಾಭರಣದೊಂದಿಗೆ ಮಂಗಳೂರಿನತ್ತ ಸಾಗಿರುವ ಶಂಕೆಯೂ ಇದೆ‘ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದರೋಡೆಕೋರರು ಸಂಘದ ಸಿಬ್ಬಂದಿಯ ಮೊಬೈಲ್ಗಳನ್ನು ಕಿತ್ತುಕೊಂಡಿದ್ದರು. ಅವುಗಳಲ್ಲಿ ಮೂರು ಮೊಬೈಲುಗಳನ್ನು ಕಚೇರಿಯ ಕೆಳಗಿನ ಮೆಟ್ಟಿಲುಗಳ ಬಳಿ ಎಸೆದಿದ್ದರು. ಬ್ಯಾಂಕ್ ವ್ಯವಸ್ಥಾಪಕಿಯ ಮೊಬೈಲನ್ನು ತಮ್ಮಲ್ಲೇ ಇಟ್ಟುಕೊಂಡಿದ್ದರು. ಈ ಮೊಬೈಲ್ ತಲಪಾಡಿ ಹೆದ್ದಾರಿ ಸಮೀಪ ಪತ್ತೆಯಾಗಿದೆ. ವಾಹನ ಸವಾರರೊಬ್ಬರು ಅದನ್ನು ಪೊಲೀಸರಿಗೆ ತಂದೊಪ್ಪಿಸಿದ್ದಾರೆ ಎಂದು ಗೊತ್ತಾಗಿದೆ.
ಸಹಕಾರಿ ಸಂಘದಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದವರು ಕಚೇರಿಗೆ ಶನಿವಾರ ದೌಡಾಯಿಸಿದ್ದರು. ಈ ವೇಳೆ ಬ್ಯಾಂಕಿನ ನಿರ್ದೇಶಕರು ಹಾಗೂ ಗ್ರಾಹಕರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಆರೋಪಿಗಳ ಸುಳಿವು ಪತ್ತೆ: ಈ ದರೋಡೆ ಪ್ರಕರಣವನ್ನು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ. ಈ ಸಲುವಾಗಿಯೇ ನಾಲ್ಕು ತನಿಖಾ ತಂಡಗಳನ್ನು ರಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕೆಲವು ಸುಳಿವುಗಳು ಸಿಕ್ಕಿವೆ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ. ಭದ್ರತಾ ಲೋಪದ ಕುರಿತು ಪ್ರತಿಕ್ರಿಯಿಸಿದ ಅವರು ‘ಸಹಕಾರಿ ಸಂಘದ ಕಚೇರಿಯಲ್ಲಿ ಕಾವಲು ಸಿಬ್ಬಂದಿ ಅಲರಾಂ ವ್ಯವಸ್ಥೆ ಇರಲಿಲ್ಲ.
ಸಿಸಿಟಿವಿ ಕ್ಯಾಮೆರಾಗಳೂ ಕಾರ್ಯನಿರ್ವಹಿಸುತ್ತಿರಲಿಲ್ಲ. ಪರಿಚಯವಿಲ್ಲದ ನಾಲ್ವರು ಕಚೇರಿಗೆ ನುಗ್ಗಿ ಬೀಗವನ್ನು ಕೇಳಿದಾಗಲೂ ಯಾರೂ ಪ್ರತಿರೋಧವನ್ನೂ ತೋರಿಲ್ಲ. ಕಚೇರಿಯಲ್ಲಿ ಒಂದು ಸಿಸಿಟಿವಿ ಕ್ಯಾಮೆರಾವನ್ನು ಮಾತ್ರ ಅಳವಡಿಸಲಾಗಿತ್ತು. ಲಾಕರ್ ಪ್ರದೇಶದ ದೃಶ್ಯಗಳು ದಾಖಲಾಗುವಂತೆ ಅದನ್ನು ಜೋಡಿಸಿರಲಿಲ್ಲ. ದರೋಡೆಕೋರರು ಕಚೇರಿಗೆ ನುಗ್ಗಿದಾಗ ಲಾಕರ್ ತೆರೆದೇ ಇತ್ತು’ ಎಂದು ಅವರು ಮಾಹಿತಿ ನೀಡಿದರು. ‘ಭದ್ರತಾ ಲೋಪದ ಬಗ್ಗೆ ಸಹಕಾರಿ ಸಂಘಗಳ ನಿಬಂಧಕರಿಗೆ ಪತ್ರ ಬರೆಯಲಿದ್ದೇವೆ.
ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಎಲ್ಲ ಸಹಕಾರಿ ಸಂಘಗಳ ಸಭೆಯನ್ನು ಶೀಘ್ರವೇ ಕರೆದು ಈ ಬಗ್ಗೆ ಚರ್ಚಿಸಲಿದ್ದೇವೆ. ಸಹಕಾರಿ ಸಂಘಗಳ ಕಚೇರಿಗೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಹೆಚ್ಚಳಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ’ ಎಂದರು. ಬೋಟ್ನಲ್ಲಿ ಪರಾರಿಯಾದರೇ? ತಲಪಾಡಿ ಟೋಲ್ಗೇಟ್ ಮೂಲಕ ಕೇರಳ ತಲುಪಿದ ದರೋಡೆಕೋರರು ಕೃತ್ಯಕ್ಕೆ ಬಳಸಿದ ಕಾರನ್ನು ಅಜ್ಞಾತ ಸ್ಥಳದಲ್ಲಿ ಬಿಟ್ಟು ಬೋಟ್ ಮೂಲಕ ಸಮುದ್ರಮಾರ್ಗವಾಗಿ ಕೇರಳಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ. ಈ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲಿಸ್ ಮೂಲಗಳು ತಿಳಿಸಿವೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ https://whatsapp.com/channel/0029VafyCqRFnSzHn1JWKi1B