ನಮ್ಮ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಎಸ್ ಎಂ ಕೃಷ್ಣ ಇಬ್ಬರೂ ಸಂಬಂಧಿಕರು. ಬೀಗರು. ಡಿಕೆ ಶಿವಕುಮಾರ್ ಮಗಳು, ಎಸ್ ಎಂ ಕೃಷ್ಣ ಅವರ ಮೊಮ್ಮಗನ ಪತ್ನಿ. ಅದನ್ನೂ ಮೀರಿ ಡಿಕೆ ಶಿವಕುಮಾರ್, ಕೃಷ್ಣ ಅವರಿಗೆ ತಂದೆ ಮತ್ತು ಗುರುವಿನ ಸ್ಥಾನಗಳನ್ನ ಕೊಟ್ಟಿದ್ದರು. ಒಂದು ರೀತಿಯಲ್ಲಿ ಅವರಿಬ್ಬರದ್ದು ದ್ರೋಣ ಅರ್ಜುನ ಬಾಂಧವ್ಯ ಎನ್ನಬಹುದು. ಕುರುಕ್ಷೇತ್ರದಲ್ಲಿ ಹೇಗೆ ಅರ್ಜುನ, ಗುರು ದ್ರೋಣರ ವಿರುದ್ಧವೇ ಹೋರಾಟ ಮಾಡಿದನೋ, ಹಾಗೆಯೇ ಕೊನೆಗಾಲದಲ್ಲಿ ಬಿಜೆಪಿ ಸೇರಿದ್ದ ಕೃಷ್ಣ, ಡಿಕೆ ಶಿವಕುಮಾರ್ ಅವರಿಗೆ ಒಂದು ರೀತಿಯಲ್ಲಿ ಎದುರಾಳಿಯಾಗಿದ್ದರು.
ಅವರಿಬ್ಬರ ಮಧ್ಯೆ 30 ವರ್ಷಗಳ ಅಂತರ..!
ಡಿಕೆ ಶಿವಕುಮಾರ್ ಮತ್ತು ಎಸ್ ಎಂ ಕೃಷ್ಣ. ಇವರಿಬ್ಬರ ಸಂಬಂಧವೇ ವಿಶೇಷ. ಏಕೆ ಅಂದ್ರೆ ಕೃಷ್ಣ ಅವರಿಗೆ 93 ವರ್ಷ. ಅದೇ ಡಿಕೆ ಅವರಿಗೆ 62 ವರ್ಷ. ಇಬ್ಬರ ನಡುವೆ ಬರೋಬ್ಬರಿ 30 ವರ್ಷ ವ್ಯತ್ಯಾಸ. ಹೀಗಿದ್ದರೂ, ಡಿಕೆ, ಎಸ್ ಎಂ ಕೃಷ್ಣ ಅವರ ಆತ್ಮೀಯರಾಗಿದ್ದರು.
ಮಂತ್ರಿ ಮಾಡಿದ್ದು ಬಂಗಾರಪ್ಪ.. ಲೀಡರ್ ಮಾಡಿದ್ದು ಎಸ್ ಎಂ ಕೃಷ್ಣ..!
ಡಿಕೆ ಶಿವಕುಮಾರ್ ಅವರನ್ನ ಮೊದಲ ಬಾರಿಗೆ ಮಂತ್ರಿ ಮಾಡಿದ ಖ್ಯಾತಿ ಎಸ್ ಬಂಗಾರಪ್ಪನವರದ್ದಾದರೆ, ಡಿಕೆ ಶಿವಕುಮಾರ್ ಒಬ್ಬ ಮಾಸ್ ಲೀಡರ್ ಆಗಿ ಬೆಳೆದಿದ್ದು ಎಸ್ ಎಂ ಕೃಷ್ಣ ಅವರಿಂದ.
ಡಿಕೆ, ಕೃಷ್ಣ ಅವರ ಅನುಯಾಯಿ ಅಷ್ಟೇ ಅಲ್ಲ, ಅವರ ಸಂಬಂಧಿಕರೂ ಹೌದು. ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯಾ ಅವರು ಮದುವೆಯಾಗಿದ್ದು, ಎಸ್ ಎಂ ಕೃಷ್ಣ ಅವರ ಮೊಮ್ಮಗ ಅಮರ್ತ್ಯ ಅವರನ್ನ.
ಕೃಷ್ಣ ಅವರಿಂದ ಡ್ರೆಸ್ ಸೆನ್ಸ್ ಕಲಿತ ಡಿಕೆ..!
ಕೃಷ್ಣ ಅವರನ್ನು ಸದಾ ನೆನಪಿಸಿಕೊಳ್ಳೋ ಡಿಕೆ ಶಿವಕುಮಾರ್, ಅವರನ್ನು ಮೊದಲು ಪರಿಚಯ ಮಾಡಿಸಿದ್ದು ಆರ್ ಟಿ ನಾರಾಯಣ್. ಆಗ ನಾನು ಸರಿಯಾದ ಬಟ್ಟೆ ಹಾಕ್ತಾ ಇರಲಿಲ್ಲ. ಆಗ ತಮಗಾಗಿ ಬಾಂಬೆಯಿಂದ ಟೈಲರ್ ಕರೆಸಿ, ಬಟ್ಟೆ ಹೊಲಿಸಿ.. ಡ್ರೆಸ್ ಸೆನ್ಸ್ ಯಾವ ರೀತಿ ಇರಬೇಕು ಎಂದು ಹೇಳಿಕೊಟ್ಟಿದ್ದರಂತೆ.
ಬಹುಶಃ ಎಸ್ ಎಂ ಕೃಷ್ಣ ಅವರಿಂದ ಕಲಿತಿರುವ ಡ್ರೆಸ್ ಸೆನ್ಸ್ ಪರಿಣಾಮವೋ ಏನೋ.. ಈಗ ಡಿಕೆ ಶಿವಕುಮಾರ್ ಅವರ ಡ್ರೆಸ್ ಸೆನ್ಸ್ ಫ್ಯಾಷನೇಟ್ ಎನಿಸುತ್ತದೆ. ಎಸ್ ಎಂ ಕೃಷ್ಣ ಅವರಿಂದ ಶಿಸ್ತು, ಸಾರ್ವಜನಿಕ ವರ್ತನೆ, ತಾಳ್ಮೆ, ಸೂಕ್ಷ್ಮವಾಗಿ ಗಮನಿಸುವುದು, ಪ್ರತಿಯೊಬ್ಬರಿಗೂ ಗೌರವ ಕೊಡುವುದು.. ಹೀಗೆ ಎಲ್ಲವನ್ನೂ ಕಲಿಯಬೇಕು ಎನ್ನುವ ಡಿಕೆ, ಕೆಲವನ್ನು ಅವರಿಂದಲೇ ಕಲಿತಿದ್ಧಾರೆ ಕೂಡ.
ಡಿಕೆ ಶಿವಕುಮಾರ್ ಬ್ರಾಂಡ್ ಬೆಂಗಳೂರು ಕನಸಿನ ಹಿಂದೆ..
ಅಂದಹಾಗೆ ಬೆಂಗಳೂರನ್ನು ಬ್ರಾಂಡ್ ಮಾಡಿದ್ದು ಎಸ್ ಎಂ ಕೃಷ್ಣ. ಈಗ ಅದನ್ನು ಮತ್ತೊಮ್ಮೆ ಬ್ರಾಂಡ್ ಬೆಂಗಳೂರು ಮಾಡಲು ಹೊರಟಿರೋದು ಡಿಕೆ ಶಿವಕುಮಾರ್. ಡಿಕೆ ಶಿವಕುಮಾರ್ ಅವರು, ಎಸ್ ಎಂ ಕೃಷ್ಣ ಅವರ ಕನಸಿನ ಹಾದಿಯನ್ನು ಮುನ್ನಡೆಸುವ ಪಣ ತೊಟ್ಟಿದ್ದಾರಾ..? ಅದನ್ನು ಮುಂದೆ ಬರುವ ದಿನಗಳು, ಸಾಧನೆಗಳು ಹೇಳಬೇಕಿದೆ.
ಮಗನಂತೆ ಕಂಡಿದ್ದರು ಎಸ್ ಎಂ ಕೃಷ್ಣ..!
ಎಸ್ ಎಂ ಕೃಷ್ಣ ನನ್ನ ಗುರು, ಮಾರ್ಗದರ್ಶಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳೋ ಡಿಕೆ ಶಿವಕುಮಾರ್, ಪುಟ್ಟಪರ್ತಿಯ ಸಾಯಿಬಾಬಾ ಅವರು ಹೇಳಿದ್ದ ಮಾತನ್ನು ನೆನಪಿಸಿಕೊಳ್ತಾರೆ. ಅಂದು ಬಾಬಾ ಹೇಳಿದ್ದಂತೆಯೇ, ಕೃಷ್ಣ ಅವರ ಕೊನೆಗಾಲದವರೆಗೂ ಇದ್ದ, ಅಂತಿಮ ಯಾತ್ರೆಯಲ್ಲೂ ಮುಂದಾಳತ್ವ ವಹಿಸಿದ್ದ ಡಿಕೆ ಶಿವಕುಮಾರ್, ಅವರ ಜೊತೆ ನಾನು ಇಷ್ಟು ಕಾಲ ಇದ್ದದ್ದೇ ನನ್ನ ಸೌಭಾಗ್ಯ ಎನ್ನುತ್ತಾರೆ.
ಟ್ರಬಲ್ ಶೂಟರ್ ಹೆಸರು ಬಂದಿದ್ದೇ ಕೃಷ್ಣ ಕಾಲದಲ್ಲಿ..!
ಎಸ್ ಎಂ ಕೃಷ್ಣ ಅವರ ಸಿಎಂ ಆಗಿದ್ದಾಗ ಡಿಕೆ ಶಿವಕುಮಾರ್ ಅವರು ಟ್ರಬಲ್ ಶೂಟರ್ ಆಗಿ ನ್ಯಾಷನಲ್ ಲೀಡರ್ ಆಗಿದ್ದು. ಕೃಷ್ಣ ಅವರ ಅವಧಿಯಲ್ಲೊಮ್ಮೆ ಮಹಾರಾಷ್ಟ್ರ ಕಾಂಗ್ರೆಸ್ ಸರ್ಕಾರ ಸಂಕಷ್ಟಕ್ಕೆ ಸಿಕ್ಕಾಗ, ಅಲ್ಲಿನ ಶಾಸಕರನ್ನೆಲ್ಲ ಕರೆಸಿ ಇಡೀ ವ್ಯವಸ್ಥೆ ನಿಭಾಯಿಸಿದ್ದ ಡಿಕೆಶಿ, ಮೊದಲ ಟಾಸ್ಕ್ನಲ್ಲಿ ಗೆದ್ದಿದ್ದರು. ಆನಂತರ ನೇರವಾಗಿ ಸೋನಿಯಾ ಕಣ್ಣಿಗೆ ಬಿದ್ದ ಡಿಕೆ ಶಿವಕುಮಾರ್, ಆನಂತರ ಅದೇ ರೀತಿಯ ಹಲವು ಟಾಸ್ಕ್ ನಿಭಾಯಿಸಿ ಹೈಕಮಾಂಡ್ ಮನಸ್ಸು ಗೆದ್ದಿದ್ದಾರೆ.
ಅವರಿಬ್ಬರದ್ದೂ ದ್ರೋಣಾರ್ಜುನ ಬಾಂಧವ್ಯ. ಗುರು ದ್ರೋಣರ ಗೆಲುವಿಗಾಗಿ ಮೊದಲ ಯುದ್ಧ ಮಾಡಿದ್ದ ಅರ್ಜುನ, ಕುರುಕ್ಷೇತ್ರದಲ್ಲಿ ಗುರು ದ್ರೋಣರ ವಿರುದ್ಧವೇ ಯುದ್ಧ ಮಾಡುವಂತಾಯ್ತು. ಅದು ವಿಧಿಲಿಖಿತ. ಆದರೆ ಕೃಷ್ಣ ಅವರನ್ನು ಮತ್ತೆ ಕಾಂಗ್ರೆಸ್ಸಿಗೆ ವಾಪಸ್ ಕರೆತರುವುದಕ್ಕಾಗಿ ಡಿಕೆ ಪ್ರಯತ್ನ ಮಾಡ್ತಾನೇ ಇದ್ರು.
ಎಸ್ ಎಂ ಕೃಷ್ಣ ಅವರು ಕೊನೆಯ ದಿನಗಳಲ್ಲಿ ಬಿಜೆಪಿ ಸೇರಿದ್ದರು. ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್ಸಿನಲ್ಲೇ ಉನ್ನತ ಸ್ಥಾನಕ್ಕೇರಿದ್ದರು. ಈ ನಡುವೆ ಡಿಕೆ, ಜೈಲು ಸೇರಿದ್ದಾಗ ಕೃಷ್ಣ ಅವರು ಬೈದಿದ್ದರಂತೆ. ಡಿಕೆ ಶಿವಕುಮಾರ್, ಮರುಮಾತನಾಡದೆ ಕೇಳಿಸಿಕೊಂಡಿದ್ದರಂತೆ. ನನ್ನನ್ನು ಮಗನಂತೆ ನೋಡುತ್ತಿದ್ದ ಕೃಷ್ಣ ಅವರಿಗೆ, ಬಯ್ಯುವ ಅಧಿಕಾರವನ್ನೂ ಕೊಟ್ಟಿದ್ದರು ಡಿಕೆ ಶಿವಕುಮಾರ್.
ಅಂದಹಾಗೆ ಡಿಕೆ ಶಿವಕುಮಾರ್ ಕೂಡಾ ಎಸ್ ಎಂ ಕೃಷ್ಣ ಅವರಂತೆಯೇ ನೀರಾವರಿ, ಇಂಧನ ಖಾತೆ ಸಚಿವರಾಗಿದ್ದವರು. ಉಪಮುಖ್ಯಮಂತ್ರಿಯಾಗಿ, ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ನಂತರ ಸಿಎಂ ಕೂಡಾ ಆದರು. ಡಿಕೆ ಶಿವಕುಮಾರ್ ಕೂಡಾ ಎಸ್ ಎಂ ಕೆ ಅವರಂತೆಯೇ ಸಿಎಂ ಆಗುತ್ತಾರಾ..? ಕಾಲವೇ ಉತ್ತರ ಹೇಳಲಿದೆ.
ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆ. ಆದರೆ ರಾಜಕೀಯದಲ್ಲಿ ಮಿತ್ರರೇ ಶತ್ರುಗಳಾಗೋ ಕಾಲದಲ್ಲಿ, ಕೃಷ್ಣ ಅವರ ಕಷ್ಟದ ದಿನಗಳಲ್ಲಿ ಹೆಗಲು ಕೊಟ್ಟಿದ್ದ ಡಿಕೆ, ಅವರ ಅಂತಿಮ ಯಾತ್ರೆಯನ್ನ ಹೆಗಲ ಮೇಲೆ ಹೊತ್ತು ಮಾಡಿದ್ದಾರೆ.