ಚನ್ನಪಟ್ಟಣ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಚನ್ನಪಟ್ಟಣದಲ್ಲಿ ಧ್ವಜಾರೋಹಣ ನೆರವೇರಿಸಲು ನಿರ್ಧರಿಸಿದ್ದಾರೆ. ಕ್ಷೇತ್ರದ ಹಿಂದಿನ ಶಾಸಕ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಜತೆಗೆ ರಾಜಕೀಯ ಜಿದ್ದಾ ಜಿದ್ದಿಗಿಳಿದಿರುವ ಡಿ.ಕೆ.ಶಿವಕುಮಾರ್ ಅವರ ಈ ನಡೆ ಈಗ ತೀವ್ರ ಕುತೂಹಲ ಮೂಡಿಸಿದೆ. ಸ್ವಾತಂತ್ರ್ಯ ದಿನಾಚರಣೆಯಂಥ ರಾಜ್ಯಮಟ್ಟದ ಕಾಠ್ಯಕ್ರಮದಲ್ಲಿ ಮುಖ್ಯಮಂತ್ರಿ ಧ್ವಜಾ ರೋಹಣ ನೆರವೇರಿಸಿದರೆ, ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುತ್ತಾರೆ. ಆದರೆ ತಾಲೂಕು ಕೇಂದ್ರದಲ್ಲಿ ಸಚಿವರು ಅದರಲ್ಲಿ ಉಪಮುಖ್ಯಮಂತ್ರಿಯೊಬ್ಬರು ಧ್ವಜಾರೋಹಣ ಮಾಡಿದ ಉದಾಹರಣೆಯೇ ರಾಜ್ಯದಲ್ಲಿಲ್ಲ.