“ಬೆಂಗಳೂರಿನ ಹೊರ ವಲಯದಲ್ಲಿ ನಾಲ್ಕು ಕಡೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು. ಅದರ ಜತೆಗೆ ಬೆಂಗಳೂರಿನಲ್ಲಿರುವ ಘನತ್ಯಾಜ್ಯ ಮಾಫಿಯಾ ಮಟ್ಟ ಹಾಕಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯರಾದ ಬಿಜೆಪಿ ಸದಸ್ಯರಾದ ಕೇಶವ್ ಪ್ರಸಾದ್ ಅವರು ಘನತ್ಯಾಜ್ಯದ ಬಗ್ಗೆ ಕೇಳಿದ ಚುಕ್ಕೆ ಗುರುತಿನ 1275ನೇ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ಅವರು ಉತ್ತರಿಸಿದರು.
“ಸದಸ್ಯರು ಬಹಳ ಗಂಭೀರವಾದ ಪ್ರಶ್ನೆ ಎತಿದ್ದಾರೆ. ಇದು ದೊಡ್ಡ ಮಾಫಿಯಾವಾಗಿದ್ದು, ಈ ಮಾಫಿಯಾವನ್ನು ಯಾವ ಸರ್ಕಾರದ ಕಾಲದಲ್ಲೂ ನಿಲ್ಲಿಸಲು ಆಗಿಲ್ಲ. ಹೀಗಾಗಿ ಎಲ್ಲರೂ ಸಹಕಾರ ನೀಡಬೇಕು. ಈವರೆಗೂ ನನ್ನಿಂದ ಬಗೆಹರಿಸಲು ಸಾಧ್ಯವಾಗಿಲ್ಲ. ಇದಕ್ಕಾಗಿ ಪ್ರತ್ಯೇಕ ನೀತಿ ತರಬೇಕಿದೆ. ಬೆಂಗಳೂರು ಶಾಸಕರು ಈ ವಿಚಾರವಾಗಿ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಹೊರ ವಲಯದಲ್ಲಿ ನಾಲ್ಕು ದಿಕ್ಕುಗಳಲ್ಲಿ ಘನತ್ಯಾಜ್ಯ ವಿಲೇವಾರಿ ಕೇಂದ್ರ ಸ್ಥಾಪಿಸಲು ಮುಂದಾಗಿದ್ದೇವೆ. ದೆಹಲಿ, ಹೈದರಾಬಾದ್, ಚೆನ್ನೈಗಳಲ್ಲಿ ಅಳವಡಿಸಿಕೊಂಡಿರುವ ಮಾದರಿ ಪರಿಶೀಲಿಸಿದ್ದೇನೆ. ಸುಮಾರು 15 ಕಡೆಗಳಲ್ಲಿ ತ್ಯಾಜದಿಂದ ಇಂಧನ ಉತ್ಪಾದನೆಗೆ ಅವಕಾಶ ನೀಡಿದ್ದೆವು. ಎಲ್ಲವೂ ವಿಫಲವಾಗಿದೆ. ಬಿಡದಿಯಲ್ಲಿ ಮಾತ್ರ ಇದನ್ನು ನಡೆಸುತ್ತಿದ್ದಾರೆ” ಎಂದು ತಿಳಿಸಿದರು.
“ಬೆಂಗಳೂರಿನಿಂದ 15 ಕಿ.ಮೀ ದೂರದಲ್ಲಿ ಹೊರವಲಯದಲ್ಲಿ ನಾಲ್ಕು ಕಡೆ 100 ಎಕರೆ ಜಮೀನು ಗುರುತಿಸಲಾಗಿದೆ. ಶೀಘ್ರವೇ ಟೆಂಡರ್ ಕರೆದು ಶಾಶ್ವತ ಪರಿಹಾರ ನೀಡಲು ಪ್ರಯತ್ನಿಸಲಾಗುತ್ತಿದೆ. ಇತ್ತೀಚೆಗೆ ಕಸದ ಟೆಂಡರ್ ವಿಚಾರದಲ್ಲಿ ನಿಮ್ಮ ಪಕ್ಷದ ಅದ್ಯಕ್ಷರೊಬ್ಬರು ನಾನು 15 ಸಾವಿರ ಕೋಟಿ ಲೂಟಿ ಮಾಡಿರುವುದಾಗಿ ಪತ್ರಿಕೆಗಳಲ್ಲಿ ವರದಿ ನೀಡಿ ಬ್ಲಾಕ್ ಮೇಲ್ ಮಾಡುವ ಪ್ರಯತ್ನ ಮಾಡಿದ್ದ. ಈ ಬೆದರಿಕೆಗೆ ಹೆದರುವ ಮಗ ನಾನಲ್ಲ. ನಮ್ಮ ಸರ್ಕಾರ ಕೂಡ ಇದಕ್ಕೆ ಜಗ್ಗುವುದಿಲ್ಲ. ಈ ವಿಚಾರದಲ್ಲಿ ಕೆಲವು ಗಂಭೀರ ವಿಚಾರಗಳಿವೆ. ಈ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಸಿಎನ್ ಜಿ ಅನಿಲ ಉತ್ಪಾದನೆಗೆ ಅವಕಾಶವಿದೆ. ಈ ವಿಚಾರವಾಗಿ ಬೆಂಗಳೂರಿನ ಬಿಜೆಪಿ ಶಾಸಕರು ಕೂಡ ಒಪ್ಪಿದ್ದಾರೆ. ಶೀಘ್ರದಲ್ಲೇ ಅಂತಿಮ ಪರಿಹಾರ ನೀಡಲಾಗುವುದು. ಮೂರು ನಾಲ್ಕು ದಿನಗಳಲ್ಲಿ ಈ ವಿಚಾರವಾಗಿ ಟೆಂಡರ್ ಕರೆಯಲಾಗುವುದು” ಎಂದು ತಿಳಿಸಿದರು.
“ನಾವು ನಾಲ್ಕು ಭಾಗಗಳಲ್ಲಿನ ಕಸ ವಿಲೇವಾರಿ ಘಟಕಕ್ಕೆ ಸಧ್ಯದಲ್ಲೇ ಟೆಂಡರ್ ಕರೆಯಲಿದ್ದು, ಯಾರು ಬೇಕಾದರೂ ಭಾಗವಹಿಸಬಹುದು. ಇಲ್ಲಿ ಮಾಫಿಯಾ ನಡೆಸುತ್ತಿರುವವರು ಅವರವರೇ ಟೆಂಡರ್ ಕರೆಯುತ್ತಿದ್ದು, ಈ ವಿಚಾರ ನ್ಯಾಯಾಲಯದಲ್ಲಿದೆ. ಶೀಘ್ರವೇ ಈ ಪ್ರಕರಣದಲ್ಲಿ ತೀರ್ಪು ಪ್ರಕಟವಾಗಲಿದ್ದು, ತೀರ್ಪು ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರವಾಗಿ ನಿಮ್ಮೆಲ್ಲರ ಸಲಹೆ ಸ್ವೀಕರಿಸಲು ನಾವು ಸಿದ್ಧ” ಎಂದು ತಿಳಿಸಿದರು.
ಭೀಮಾ ನದಿ ನೀರಿನ ಬಗ್ಗೆ ತಂಡ ರಚಿಸಿ ತನಿಖೆ:
ಬಿಜೆಪಿ ಸದಸ್ಯರಾದ ತಳವಾರ ಸಾಬಣ್ಣ ಅವರು ಭೀಮಾ ನದಿ ನೀರನ್ನು ಮಹಾರಾಷ್ಟ್ರ ಅಕ್ರಮವಾಗಿ ಬಳಸಿಕೊಳ್ಳುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ನೀರಾವರಿ ಸಚಿವರೂ ಆದ ಶಿವಕುಮಾರ್ ಅವರು ಉತ್ತರಿಸಿದರು.
“ಗಡಿ ಪ್ರದೇಶ ಭಾಗದಲ್ಲಿ ಬೇಸಿಗೆ ಸಮಯದಲ್ಲಿ ಸಮಸ್ಯೆಯಾದಾಗ ಈ ರೀತಿ ಒತ್ತಡಗಳು ಬರುತ್ತವೇ. ನಾನು ವಾಸ್ತವಾಂಶ ನೀಡಿದ್ದೇನೆ. ನೀರು ಹೆಚ್ಚಾಗಿದ್ದಾಗ ಅವರು ಹರಿಸುತ್ತಾರೆ. ನೀರು ಕಡಿಮೆಯಾಗಿದ್ದಾಗ ನೀರು ಇಲ್ಲ ಎನ್ನುತ್ತಾರೆ. ಈ ಪರಿಸ್ಥಿತಿ ನಮ್ಮಲ್ಲೂ ಆಗುತ್ತದೆ ಬೇರೆ ರಾಜ್ಯಗಳಲ್ಲೂ ಆಗುತ್ತದೆ. ಎಲ್ಲಾ ಸಮಯದಲ್ಲೂ ನೀರು ನಿಭಾಯಿಸಬೇಕು ಎಂದು ತಾವು ಅಪೇಕ್ಷಿಸುತ್ತಿದ್ದೀರಿ. ಕೆಲವೊಮ್ಮೆ ನಾವು ವಿಜಯಪುರದಿಂದ ಮಹಾರಾಷ್ಟ್ರಕ್ಕೆ ನೀಡಬೇಕಾಗುತ್ತದೆ. ನಿಮ್ಮ ವಿಚಾರ ನಮ್ಮ ಅರಿವಿನಲ್ಲಿದೆ. ಆ ಸಮಯ ಬಂದಾಗ ಪರಿಸ್ಥಿತಿಗೆ ತಕ್ಕಂತೆ ಸೂಕ್ತ ಪತ್ರ ಬರೆದು ಸಮಸ್ಯೆ ನಿಭಾಯಿಸಲಾಗುವುದು” ಎಂದು ತಿಳಿಸಿದರು.
ನಂತರ ಮಾತನಾಡಿದ ಸಾಬಣ್ಣ ಅವರು, “ನ್ಯಾ.ಬಚಾವತ್ ಆಯೋಗದ ಪ್ರಕಾರ ಮಹಾರಾಷ್ಟ್ರದಿಂದ ಕರ್ನಾಟಕದ ಭೀಮಾ ನದಿಗೆ ಪ್ರತಿ ವರ್ಷ 15 ಟಿಎಂಸಿ ನೀರು ಬಿಡಬೇಕು. ಆದರೆ ಅವರು ಬಿಡುತ್ತಿಲ್ಲ. ಕಾರಣ, ಮಹಾರಾಷ್ಟ್ರದಲ್ಲಿ ಸಿನಾ ನದಿಗೆ ಸುರಂಗದ ಮೂಲಕ ನೀರು ಬಿಟ್ಟುಕೊಂಡು ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕರ್ನಾಟಕದವರು ಎಚ್ಚರಿಕೆಯಿಂದ ಇರಬೇಕು. ವಿಜಯಪುರ, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆ ಬರ ಪೀಡಿತ ಪ್ರದೇಶಗಳಾಗಿದ್ದು, ಶಿವಕುಮಾರ್ ನಾಟೇಕರ್ ಎಂಬ ಯುವಕನ ನೇತೃತ್ವದಲ್ಲಿ ನಿರಂತರ ಹೋರಾಟ ಮಾಡಲಾಗುತ್ತಿದೆ. ನಮ್ಮ ರಾಜ್ಯಕ್ಕೆ ಬರಬೇಕಾದ ನೀರು ಬರುತ್ತಿಲ್ಲ. ಈ ವಿಚಾರವಾಗಿ ನಿಮ್ಮ ಕಟ್ಟುನಿಟ್ಟಿನ ಕ್ರಮವೇನು” ಎಂದು ಕೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿಗಳು, “ಸುರಂಗ ಮೂಲಕ ನೀರು ಅಕ್ರಮವಾಗಿ ಬಳಸುತ್ತಿರುವ ವಿಚಾರವಾಗಿ ನನಗೆ ಹೊಸದಾಗಿ ತಿಳಿಯುತ್ತಿದೆ. ಈ ವಿಚಾರವಾಗಿ ನಾನು ಒಂದು ತಂಡವನ್ನು ಕಳುಹಿಸಿ ತನಿಖೆ ಮಾಡಿಸುತ್ತೇನೆ. ನೀರಿನ ಕೊರತೆ ಸಮಯದಲ್ಲಿ ಇಂತಹ ಸಮಸ್ಯೆ ಇದ್ದೇ ಇದೆ. ಈ ಬಗ್ಗೆ ನಾವು ವರದಿ ತರಿಸಿಕೊಂಡು ಮುಂದಿನ ಅಧಿವೇಶನದ ವೇಳೆಗೆ ಮಾಹಿತಿ ನೀಡುತ್ತೇನೆ” ಎಂದು ತಿಳಿಸಿದರು.
ಪಾಲಿಕೆ ಆಸ್ತಿ ವಿಚಾರದಲ್ಲೂ ಒಟಿಎಸ್ ಬಗ್ಗೆ ಆಲೋಚನೆ
ಬಿಬಿಎಂಪಿಯ ಆಸ್ತಿ, ಹಾಗೂ ಬಿಬಿಎಂಪಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಇರುವುದೇಕೆ ಎಂದು ಬಿಜೆಪಿ ಸದಸ್ಯ ಗೋವಿಂದರಾಜು ಅವರು ಕೇಳಿದ ಚುಕ್ಕೆ ಗುರುತಿನ 1195ನೇ ಪ್ರಶ್ನೆಗೆ ಶಿವಕುಮಾರ್ ಅವರು ಉತ್ತರಿಸಿದರು.
“ಸದಸ್ಯರು ಪಾಲಿಕೆಗೆ ಅನುಕೂಲವಾಗುವ ಪ್ರಶ್ನೆ ಕೇಳಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಬಗ್ಗೆ ನಾನು ಕೂಡ ಆಲೋಚನೆ ಮಾಡಿದ್ದೇನೆ. ಪಾಲಿಕೆ ಆಸ್ತಿಗಳನ್ನು ಪಡೆದವರು ಯಾರೂ ಖಾಲಿ ಮಾಡಿಲ್ಲ. ದೇವಾಲಯ, ಸಮುದಾಯ ಭವನ, ಅಂಗಡಿ, ಶಾಲೆ ಕಟ್ಟಿ ಕೇವಲ 7-8 ರೂ. ಬಾಡಿಗೆ ಕಟ್ಟುತ್ತಿದ್ದಾರೆ. ಅವರನ್ನು ಖಾಲಿ ಮಾಡಿಸಲೂ ಆಗುತ್ತಿಲ್ಲ. ಹೀಗಾಗಿ ಪ್ರತ್ಯೇಕವಾದ ನಿಯಮ ಹೊರಡಿಸಲು ತೀರ್ಮಾನಿಸಿದ್ದೇನೆ. ಇವರನ್ನು ಖಾಲಿ ಮಾಡಿಸುವಾಗ ಕೋರ್ಟ್ ಮಧ್ಯಪ್ರವೇಶವಾಗುವ ಸಾಧ್ಯತೆ ಇದೆ. ಹೀಗಾಗಿ ಒಟಿಎಸ್ ವ್ಯವಸ್ಥೆ ಮೂಲಕ ಏನಾದರೂ ಮಾಡಬಹುದೇ ಎಂದು ಆಲೋಚನೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.
“ಇನ್ನು ಶಾಲಾ ಕಟ್ಟಗಳಿಗೆ ವಿನಾಯಿತಿ ನೀಡಬಹುದೇ, ದೇವಾಲಯಗಳನ್ನು ನಾವು ಮುಟ್ಟಲು ಸಾಧ್ಯವಿಲ್ಲ. ಹೀಗಾಗಿ ಆ ಆಸ್ತಿಗಳಿಗೆ ನಿಗದಿತ ಬೆಲೆ ನಿಗದಿಪಡಿಸಿ ಅವರಿಗೆ ಆಸ್ತಿ ನೀಡಬಹುದೇ ಎಂಬ ಆಲೋಚನೆಯನ್ನೂ ಮಾಡಲಾಗುತ್ತಿದೆ. ಕೆ.ಆರ್. ಮಾರುಕಟ್ಟೆಯಲ್ಲಿ 3-4ನೇ ಅಂತಸ್ಥಿನಲ್ಲಿ ಅಂಗಡಿ ನಿಗದಿಯಾಗಿದ್ದರೂ ಯಾರೊಬ್ಬರೂ ಅಲ್ಲಿಗೆ ಹೋಗುತ್ತಿಲ್ಲ. ಬಾಡಿಗೆ ಕಟ್ಟುತ್ತಿಲ್ಲ. ಕೆಲವು ತಾಂತ್ರಿಕ ಸಮಸ್ಯೆ ಇದ್ದು, ಇದಕ್ಕಾಗಿ ಪ್ರತ್ಯೇಕ ನೀತಿ ಸಿದ್ಧಪಡಿಸುತ್ತಿದ್ದು, ಅಂತಿಮ ಹಂತದಲ್ಲಿದೆ. ಪಾಲಿಕೆಯಲ್ಲಿ 50 ಸಾವಿರ ಕೋಟಿ ಮೌಲ್ಯದ ಆಸ್ತಿ ಇರುವುದು ನಿಜ. ಅದರಿಂದ ಪಾಲಿಕೆಗೆ ಆದಾಯ ಬರುವಂತೆ ಮಾಡಬೇಕು. ಅದಕ್ಕಾಗಿಯೇ ನಿಮಗೆ ಮಾಹಿತಿ ಇರಲಿ ಎಂದು ನಾವು ಸುದೀರ್ಘವಾಗಿ ಉತ್ತರ ನೀಡಿದ್ದೇನೆ” ಎಂದು ತಿಳಿಸಿದರು.
ನ್ಯಾಯಾಲಯ ಸಮಿತಿ ವರದಿ ನಂತರ ಗಣ್ಯರಿಗೆ ನಿವೇಶನದ ಬಗ್ಗೆ ತೀರ್ಮಾನ
ಮುಖ್ಯಮಂತ್ರಿಗಳ ವಿವೇಚನೆ ಮೇರೆಗೆ ಗಣ್ಯರಿಗೆ ನಿವೇಶನ ಹಂಚಿಕೆ ಮಾಡುವ ಯೋಜನೆ ಸ್ಥಗಿತಗೊಳಿಸಲಾಗಿದೆಯೇ ಎಂದು ಸದಸ್ಯರಾದ ಅನಿಲ್ ಕುಮಾರ್ ಅವರು ಕೇಳಿದ ಚುಕ್ಕೆ ಗುರುತಿನ 130ನೇ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, “ಈ ವಿಚಾರವಾಗಿ ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ. ಈ ಹಿಂದೆ ಗಣ್ಯರಿಗೆ ನಿವೇಶನ ನೀಡಲಾಗುತ್ತಿತ್ತು. ಈ ಮಧ್ಯೆ ಧರಂ ಸಿಂಗ್ ಅವರ ಸರ್ಕಾರದಲ್ಲಿ ಈ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತರಲಾಗಿತ್ತು. ಈ ವಿಚಾರವಾಗಿ ಹೊಸ ನೀತಿ ರೂಪಿಸಬೇಕು ಎಂದು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಕೂಡ ರಚಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜ ಸೇವಕರಿಗೆ ನಿವೇಶನ ನೀಡಲು ಅವಕಾಶ ಮಾಡಿಕೊಡಲಾಗಿದ್ದು, ರಾಜಕೀಯ ನಾಯಕರಿಗೆ ನಿವೇಶನ ನೀಡಲು ಅವಕಾಶವಿಲ್ಲ. ಈ ವಿಚಾರವಾಗಿ ನ್ಯಾಯಾಲಯದ ಸಮಿತಿ ವರದಿ ನೀಡಿದ ನಂತರ ನಾವು ತೀರ್ಮಾನ ಮಾಡುತ್ತೇವೆ. ಈ ವಿಚಾರವಾಗಿ ನ್ಯಾಯಾಲಯದಿಂದಲೇ ಮಾರ್ಗಸೂಚಿ ಪಡೆಯಬಹುದೇ ಎಂದು ಪರಿಶೀಲಿಸುತ್ತೇನೆ. ಈ ಹಿಂದೆ ನೀಡಿದ್ದ ನಿವೇಶನಗಳು ರದ್ದಾಗಿವೆ. ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ” ಎಂದು ತಿಳಿಸಿದರು.
ಸರ್ಕಾರದಿಂದ ಸಮಿತಿ ಮಾಡಿ ಸರ್ಕಾರವೇ ಮಾನದಂಡ ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಸಿದರೆ ನ್ಯಾಯಾಲಯ ಅವಕಾಶ ನೀಡಬೇಹುದಲ್ಲವೇ ಎಂದು ಕೇಳಿದಾಗ, “ಈಗಾಗಲೇ ನಾಲ್ಕು ಸಮಿತಿಗಳನ್ನು ರಚಿಸಲಾಗಿದ್ದು, ಸದಸ್ಯರು ಹೇಳಿರುವ ವಿಚಾರವನ್ನು ಪರಿಶೀಲಿಸಲಾಗುವುದು” ಎಂದರು.
ಒಂದೇ ಹಂತದಲ್ಲಿ ಭೂಸ್ವಾಧೀನ ಪರಿಹಾರ ನೀಡಲಾಗುವುದು:
ಕೃಷ್ಣಾ ಮೇಲ್ದಂಡೆ ಯೋಜನೆಗೆ ಖರ್ಚಾಗಿರುವ ಮೊತ್ತ ಹಾಗೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ನೆಪ ನೀಡುತ್ತಿರುವುದೇಕೆ ಎಂದು ಬಿಜೆಪಿ ಸದಸ್ಯರಾದ ಪಿ.ಹೆಚ್ ಪೂಜಾರ್ ಅವರು ಕೇಳಿದ 1175ನೇ ಚುಕ್ಕೆ ಗುರುತಿನ ಪ್ರಶ್ನೆಗೆ ಶಿವಕುಮಾರ್ ಅವರು ಉತ್ತರಿಸಿದರು.
“ಮೊನ್ನೆಯಷ್ಟೇ ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ಎಲ್ಲಾ ಮಂತ್ರಿ ಶಾಸಕರನ್ನು ಸೇರಿಸಿಕೊಂಡು ಮುಖ್ಯಮಂತ್ರಿಗಳು ಸಭೆ ಮಾಡಿದ್ದಾರೆ. ಬೊಮ್ಮಾಯಿ ಅವರ ಕಾಲದಲ್ಲಿ ಅಧಿಸೂಚನೆ ಆಗಿ ಅವರ ಸಚಿವರು ಎರಡು ಹಂತದಲ್ಲಿ ಯೋಜನೆ ಜಾರಿ ಮಾಡಲು ಮುಂದಾಗಿ ನಂತರ ಅವರೇ ಗಾಬರಿಯಾಗಿದ್ದರು. ಗೆಜೆಟ್ ನೋಟಿಫಿಕೇಶನ್ ಆಗದೇ ಇದ್ದರೂ ಒಂದೇ ಹಂತದಲ್ಲಿ ಭೂಸ್ವಾಧೀನದ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದೇವೆ. ಈ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾನಿರತರ ಬಳಿ ನಿನ್ನೆ ಜಿಲ್ಲಾ ಮಂತ್ರಿಗಳನ್ನು ಕಳುಹಿಸಿ ಅವರಿಗೆ ಮನವರಿಕೆ ಮಾಡಿದ್ದೇವೆ” ಎಂದು ತಿಳಿಸಿದರು.
“ಆರ್ಥಿಕ ವೆಚ್ಚ ಒಂದೇ ದಿನದಲ್ಲಿ ವ್ಯವಸ್ಥೆ ಮಾಡಲು ಆಗುವುದಿಲ್ಲ. ಹಂತ ಹಂತವಾಗಿ ಹಣ ಒದಗಿಸಲಾಗುವುದು. ಭೂಸ್ವಾಧೀನ ದರ ನಿಗದಿ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ. ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ನಾವು ಹಣ ವೆಚ್ಚ ಮಾಡಲಾಗುವುದು. ನೀರಾವರಿ ಇಲಾಖೆಯ 16 ಸಾವಿರ ಕೋಟಿ ಅನುದಾನದಲ್ಲಿ 8 ಸಾವಿರ ಕೋಟಿ ಸಾಲ ಪಾವತಿಗೆ ವೆಚ್ಚ ಮಾಡಲಾಗುತ್ತಿದ್ದು, ಉಳಿದ 8 ಸಾವಿರ ಕೋಟಿಯಲ್ಲಿ ನಾಲ್ಕು ನಿಗಮಗಳ ಯೋಜನೆಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸುವ ಪ್ರಯತ್ನ ಮಾಡುತ್ತೇವೆ. ನೀರಾವರಿಗೆ ಒಟ್ಟಾರೆ 2 ಲಕ್ಷ ಕೋಟಿ ವೆಚ್ಚ ಮಾಡಲು ನಾವು ರಾಜಕೀಯವಾಗಿ ತೀರ್ಮಾನ ಮಾಡಿದ್ದು, ಸದ್ಯದ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಯೋಜನೆಗೆ ಹಣಕಾಸು ಒದಗಿಸಲಾಗುವುದು” ಎಂದು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನದ ಪರಿಹಾರ ಬಿಡುಗಡೆ ಬಗ್ಗೆ ಸದಸ್ಯರಾದ ಕೆ.ಹೆಚ್ ಪೂಜಾರ್ ಅವರು ಕೇಳಿದ 436ನೇ ಪ್ರಶ್ನೆಗೆ ಶಿವಕುಮಾರ್ ಅವರು ಉತ್ತರಿಸಿದರು. “ಇಲ್ಲಿ ಎರಡು ಮೂರು ವಿಚಾರಗಳಿವೆ. ಕಂದಾಯ ಇಲಾಖೆಯಿಂದ ನೀರಾವರಿ ಇಲಾಖೆಗೆ ಜಮೀನು ಪಡೆಯಬೇಕು. ಈ ಪ್ರದೇಶದ ಮೇಲೆ ನೀರಾವರಿ ಇಲಾಖೆ ನಿಯಂತ್ರಣದಲ್ಲಿರಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ. ಒಂದೇ ಹಂತದಲ್ಲಿ ಹಣ ನೀಡಬೇಕು ಎಂದು ನೀವು ಅಪೇಕ್ಷೆಪಡುತ್ತಿದ್ದೀರಿ. ಎಲ್ಲಾ ಪಕ್ಷದವರು ಕೂತು ಈ ವಿಚಾರವಾಗಿ ಚರ್ಚೆ ಮಾಡಿ ತೀರ್ಮಾನ ಮಾಡೋಣ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಭಾಪತಿಗಳು ನೀವು ಎಕರೆಗೆ ಎಷ್ಟು ಪರಿಹಾರ ಕೇಳುತ್ತಿದ್ದೀರಿ ಎಂದು ಕೇಳಿದರು. ಅದಕ್ಕೆ ಪೂಜಾರ್ ಅವರು ಉತ್ತರಿಸಿ ಎಕರೆಗೆ 40 ಲಕ್ಷ ಪರಿಹಾರ ಕೇಳುತ್ತಿದ್ದೇವೆ ಎಂದರು.
ನಂತರ ಮಾತನಾಡಿ ಶಿವಕುಮಾರ್ ಅವರು, “ಬೊಮ್ಮಾಯಿ ಅವರ ಸರ್ಕಾರದಲ್ಲಿ ಈ ಭಾಗದ ಮಂತ್ರಿಗಳು ಸೇರಿ 20-25 ಲಕ್ಷ ನಿಗದಿ ಮಾಡಿದ್ದು, ಈಗ ದುಪ್ಪಟ್ಟು ಪರಿಹಾರ ಕೇಳುತ್ತಿದ್ದಾರೆ. ಕೆಲವು ಜನರು ಕೋರ್ಟ್ ಮೆಟ್ಟಿಲೇರಿ ಎಕರೆಗೆ 14 ಕೋಟಿ ಪರಿಹಾರ ತೀರ್ಮಾನ ಮಾಡಿದ್ದಾರೆ. ಮತ್ತೆ ಕೆಲವು ಕಡೆ 10 ಕೋಟಿ ನಿಗದಿ ಮಾಡಿದ್ದಾರೆ. ಆದರೆ ಅಲ್ಲಿ ಭೂಮಿಯ ಬೆಲೆ ಇರುವುದು ಎಕರೆಗೆ 3.75 ಲಕ್ಷ ಮಾತ್ರ. ಈ ಹಣ ಸಂಪೂರ್ಣವಾಗಿ ರೈತರಿಗೂ ಸೇರುವುದಿಲ್ಲ. ಇದರ ಹಿಂದಿರುವ ವಿಚಾರ ಕೇಳಿದರೆ ಎಲ್ಲರೂ ಗಾಬರಿಯಾಗುತ್ತೀರಿ. ಇಷ್ಟು ಪ್ರಮಾಣದಲ್ಲಿ ಬೆಂಗಳೂರಿನಲ್ಲೂ ಪರಿಹಾರವಿಲ್ಲ” ಎಂದು ತಿಳಿಸಿದರು.
ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಕ್ಕಳಿಗೆ ಹಾಲುಣಿಸುವ ಕೇಂದ್ರ ಸ್ಥಾಪನೆ:
ಸದಸ್ಯೆ ಉಮಾಶ್ರೀ ಅವರು ಮೆಟ್ರೋದಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರನ್ನು ಖಾಯಂ ಮಾಡಬೇಕು ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ತಾಯಂದಿರು ಮಕ್ಕಳಿಗೆ ಹಾಲುಣಿಸುವ ವ್ಯವಸ್ಥೆ ಕಡಿಮೆ ಇರುವ ವಿಚಾರವಾಗಿ ಕೇಳಿದ ಚುಕ್ಕೆ ಗುರುತಿನ 1219 ಪ್ರಶ್ನೆಗೆ ಉತ್ತರ ನೀಡಿದರು, “ಸದಸ್ಯರ ಸಲಹೆ ಗಂಭೀರವಾಗಿ ಪರಿಗಣಿಸುತ್ತೇವೆ. ಬೇರೆ ಮೆಟ್ರೋ ನಿಲ್ದಾಣಗಳಲ್ಲಿ ಈ ಸೌಲಭ್ಯ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ” ಎಂದು ತಿಳಿಸಿದರು.
ಕೋಲಾರ, ಚಿಕ್ಕಬಳ್ಳಾಪುರದವರಿಗೆ ಮಾತ್ರ ನೀರಿನ ಬೆಲೆ ಗೊತ್ತಿದೆ
ರಾಮಥಾಳ (ಮರೋಳ) ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ ಹನಿ ನೀರಾವರಿ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಸದಸ್ಯರಾದ ಹನುಮಂತ ನಿರಾಣಿ ಅವರು ಕೇಳಿದ ತಡೆಹಿಡಿಯಲಾರದ ಪ್ರಶ್ನೆಗೆ ಶಿವಕುಮಾರ್ ಅವರು ಉತ್ತರಿಸಿದರು. “ಎಂ.ಬಿ ಪಾಟೀಲ್ ಅವರು ನೀರಾವರಿ ಸಚಿವಾರಾಗಿದ್ದಾಗ ನಾನು ಹೋಗಿ ಈ ಯೋಜನೆಗೆ ಚಾಲನೆ ನೀಡಿದ್ದೆ. ಈ ಯೋಜನೆ ಸಾಕಾರವಾಗಲಿದೆ ಎಂದು ಭಾವಿಸಿದ್ದೆ. ನನ್ನ ಕ್ಷೇತ್ರದಲ್ಲೂ ಇದನ್ನು ಜಾರಿ ಮಾಡಲು ಹೊರಟೆವು. ಈಗ ಈ ಯೋಜನೆ ವಿಫಲವಾಗಿದೆ. ರೈತರು ತಾಳ್ಮೆ ವಹಿಸುವುದಿಲ್ಲ. ಅವರೇ ಕೈಯಿಂದ ಹಣ ಹಾಕಿ ಈ ವ್ಯವಸ್ಥೆ ಅಳವಡಿಸಿಕೊಂಡರೆ ಅದನ್ನು ಉಳಿಸಿಕೊಳ್ಳುತ್ತಾರೆ. ಸರ್ಕಾರ ಹಣ ನೀಡಿದರೆ ಅದರ ಬಗ್ಗೆ ಹೆಚ್ಚು ಆಸಕ್ತಿ ತೋರುವುದಿಲ್ಲ. ಹೀಗಾಗಿ ಕೆಲವರು ಸರಿಯಾದ ನಿರ್ವಹಣೆ ಮಾಡುತ್ತಿಲ್ಲ ಎಂದು ಕೆಲವು ಸಂಸ್ಥೆಗೆ ಬಿಲ್ ತಡೆ ಹಿಡಿಯಲಾಗಿದೆ. ಮಧ್ಯಪ್ರದೇಶದ ಮಾದರಿ ನಾವು ಪರಿಶೀಲಿಸುತ್ತಿದ್ದೇವೆ. ಇದನ್ನು ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ. ನಮ್ಮಲ್ಲಿ ನೀರಿನ ಬೆಲೆ ಗೊತ್ತಿರುವುದು ಕೋಲಾರ ಮತ್ತು ಚಿಕ್ಕಬಳ್ಳಾಪುರದವರಿಗೆ ಮಾತ್ರ. ಉಳಿದ ಭಾಗದಲ್ಲಿರುವವರಿಗೆ ನೀರಿನ ಬೆಲೆ ಗೊತ್ತಿಲ್ಲ. ಈ ಎರಡು ಜಿಲ್ಲೆಯಲ್ಲಿ 2 ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಬಳಸುತ್ತಿದ್ದು, ಹಣ್ಣು, ತರಕಾರಿ, ರೇಷ್ಮೆ, ಹೂವ ಬೆಳೆಯುತ್ತಿದ್ದಾರೆ. ಈ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಈ ಯೋಜನೆಗೆ ಸಂಬಂಧಿಸಿದಂತೆ ತಾಂತ್ರಿಕ ಸಮಿತಿ ರಚಿಸಲಾಗಿದೆ. ವರದಿ ಬಂದ ನಂತರ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.