ವಿರೋಧ ಪಕ್ಷದವರದು ಗೊತ್ತಾಯ್ತಲ್ಲ, ಇಷ್ಟು ವೀಕ್ ಆಗ್ತಾರೆ ಅಂತ ನಾನು ತಿಳಿದುಕೊಂಡಿರಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ಸಂಬಂಧಪಟ್ಟಂತೆ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಬಳಿಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ವಿರೋಧ ಪಕ್ಷದವರಿಗೆ ಟಾಂಗ್ ಕೊಟ್ಟರು.
ರಾತ್ರಿ ಎಲ್ಲಾ ಜೆಡಿಎಸ್ ಸಭೆಗಳು ನಡೆದಿವೆ, ಜೆಡಿಎಸ್ ನವರ ಸೀಟು ಬಿಟ್ಟು ಕೊಡುತ್ತಾರೆ ಅಂತ ಸಭೆಯಲ್ಲಿದ್ದಾಗ ಯಾರೋ ಕರೆ ಮಾಡಿ ಹೇಳಿದ್ರು. ಏನೋ ಬಿಟ್ಟು ಕೊಡ್ತಾ ಇದ್ದಾರೆ ಕ್ಷೇತ್ರ ನಾ ಅಂತ ಮಾಹಿತಿ ಬಂತು, ಇಷ್ಟು ವೀಕ್ ಅಂತ ನಾನು ಅಂದುಕೊಂಡಿರಲಿಲ್ಲ. ಫೈಟ್ ಮಾಡ್ತಾರೆ ಅಂತ ಅನ್ಕೊಂಡಿದ್ದೆ ಆದರೆ ಬಿಟ್ಟುಕೊಡುತ್ತಾರೆ ಅಂತ ಈಗ ಮಾಹಿತಿ ಬಂತು ಎಂದು ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ನಾನು ನಮ್ಮ ಕಾರ್ಯಕರ್ತರ ಮುಖಂಡರ ಅಭಿಪ್ರಾಯವನ್ನು ಕೇಳಿದ್ದೇನೆ. ಯಾರೇ ಅಭ್ಯರ್ಥಿಯಾದರು, ಡಿಕೆ ಶಿವಕುಮಾರ್ ಅಭ್ಯರ್ಥಿ ಅಂತ ಕೆಲಸ ಮಾಡಬೇಕು ಅಂತ ಹೇಳಿದ್ದೇವೆ. ನಮ್ಮ ಕಾರ್ಯಕರ್ತರ ಜೊತೆಗೆ ನಾನು ಮಾತನಾಡುತ್ತಿದ್ದೇನೆ. ಜೆಡಿಎಸ್ ಕ್ಷೇತ್ರ ಬಿಟ್ಟು ಕೊಡ್ತಿದಾರೆ ಅಂತೆ, ಆ ರೀತಿಯಾದ ಸುದ್ದಿ ಕೇಳ್ತಾ ಇದ್ದೇನೆ. ನಮ್ಮ ಜನ ನೋಡೋಕೆ ಬಂದಿದ್ದರು. ನಾನೇ ಕ್ಯಾಂಡಿಡೇಟ್, ಯಾರೇ ನಿಂತುಕೊಳ್ಳಲಿ, ಅದನ್ನ ನೋಡೋಕೆ ಹೋಗ್ಬೇಡಿ ಎಂದು ಅವರಿಗೆ ಹೇಳಿದ್ದೀನಿ ಎಂದು ಡಿಕೆ ಶಿವಕುಮಾರ್ ಹೇಳಿದರು.
ಯುದ್ಧಕ್ಕೂ ಮುನ್ನ ಶಸ್ತ್ರ ತ್ಯಾಗನಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಇದನ್ನ ನೀವು ಅವರನ್ನೇ ಕೇಳಬೇಕು ಎಂದರು. ಎಲ್ಲಾ ಕಾರ್ಯಕರ್ತರ ಜೊತೆಗೂ ಮಾತನಾಡಿದ್ದೇನೆ, ಅವರ ಅಭಿಪ್ರಾಯ ಹೇಳಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹಲವು ಸಾಧ್ಯತೆಗಳು ಇರುತ್ತವೆ. ಯಾರು ಬೇಕಾದರೂ ಕ್ಯಾಂಡಿಡೇಟ್ ಆಗಬಹುದು. ಕಾರ್ಯಕರ್ತರನ್ನು ನಿಲ್ಲಿಸಿದ್ರು ಕೂಡ ತಯಾರಿರಬೇಕು ಅಂತ ಹೇಳಿದ್ದೇವೆ. ಡಿಕೆ ಸುರೇಶ್ ಅವರ ಹೆಸರು ಕೂಡ ಹೇಳಿದ್ದಾರೆ, ಯಾರಿಗೂ ನಾವು ಮನವೊಲಿಸುವುದಿಲ್ಲ ನಾವು ಇಂಥವರು ಕ್ಯಾಂಡಿಡೇಟ್ ಅಂತ ಹೇಳ್ತೇವೆ ಎಂದು ಡಿಕೆ ಶಿವಕುಮಾರ್ ಸಭೆಯ ನಂತರ ಹೇಳಿದರು.