ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಸಿಎಂ ಬದಲಾವಣೆಯ ಚರ್ಚೆ ಜೋರಾಗಿ ನಡೆಯುತ್ತಿದೆ. ಮತ್ತೊಂದೆಡೆ ರಾಜಕೀಯ ನಾಯಕರ ಟೆಂಪಲ್ ರನ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ನಾಯಕರು ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದರೆ ಯಾವುದೋ ಒಂದು ಮಹತ್ವದ ಗುರಿಯನ್ನೇ ಇಟ್ಟಿದ್ದಾರೆ ಎಂದರ್ಥ. ಕಾರ್ಯ ಸಿದ್ದಿಗಾಗಿ ದೇವರ ಮೊರೆ ಹೊಗುತ್ತಾರೆ ಎಂಬುದು ಜನರ ಅಭಿಪ್ರಾಯ.
ಇದೀಗ ರಾಜ್ಯ ರಾಜಕೀಯದ ಪ್ರಮುಖ ನಾಯಕರಾದ ಕಾಂಗ್ರೆಸ್ ಪಕ್ಷದ ಸಾರಥಿ, ಡಿಸಿಎಂ ಡಿಕೆ ಶಿವಕುಮಾರ್ ಅವರು ದಿಢೀರ್ ಅಂತ ಟೆಂಪಲ್ ರನ್ ಶುರು ಮಾಡಿದ್ದಾರೆ. ಭಾರೀ ಕುತೂಹಲ ಮೂಡಿಸ್ತಿದೆ ಡಿಸಿಎಂ ಡಿ ಕೆ ಪ್ರವಾಸ. ತಮಿಳುನಾಡಿನ ಪ್ರಮುಖ ದೇವಸ್ಥಾನಗಳಿಗೆ ಡಿಕೆ ಶಿವಕುಮಾರ್ ಅವರು ಪತ್ನಿ ಉಷಾ ಜೊತೆ ಭೇಟಿ ನೀಡಿದ್ದರು. ಅಲ್ಲಿ ಶಕ್ತಿ ದೇವತೆ ಪ್ರಥ್ಯಂಗಿರಾ ದೇವಸ್ಥಾನದಲ್ಲಿ ಡಿಕೆ ಹೋಮ ಹವನಾದಿಗಳನ್ನ ಮಾಡಿಸಿದ್ದರು. ವರದರಾಜ ಪೆರುಮಾಳ್ ದೇವಾಲಯದಲ್ಲಿ ಡಿಕೆ ಶಿವಕುಮಾರ್ ಅವರು ಪೂಜೆ ಪುನಸ್ಕಾರಗಳನ್ನ ಮಾಡಿದ್ದರು.
ನಂತರ ಕೇರಳ ಪ್ರವಾಸ ಕೈಗೊಂಡರು ಇಂದು ಡಿಕೆ ಶಿವಕುಮಾರ್ ಅವರು ಶೃಂಗೇರಿಗೆ ತೆರಳಿದ್ದಾರೆ. ಶೃಂಗೇರಿಯ ಶಾರದಾಂಬೆ ದರ್ಶನ ಪಡೆದು ಡಿಕೆ ಶಿವಕುಮಾರ್ ಅವರು ಧನ್ಯರಾಗಿದ್ದಾರೆ. ಹೀಗೆ ಸಾಲು ಸಾಲು ದೇವಾಲಯಗಳಿಗೆ ಡಿಕೆ ಶಿವಕುಮಾರ್ ಅವರು ಭೇಟಿ ನೀಡುತ್ತಿರುವುದು ರಾಜಕೀಯ ಲೆಕ್ಕಾಚಾರದ ಮುನ್ನುಡಿ ಎಂದು ಹೇಳಲಾಗುತ್ತಿದೆ. ಡಿಕೆ ಶಿವಕುಮಾರ್ ಅವರು ದೆಹಲಿ ಪ್ರವಾಸದ ಬಳಿಕ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದರಿಂದ ಸಿದ್ದರಾಮಯ್ಯ ಬಣದ ನಾಯಕರಿಗೆ ಶಾಕ್ ಆಗಿದೆ.
ಹೌದು.. ಡಿಸಿಎಂ ಡಿಕೆ ಶಿವಕುಮಾರ್ ಪೂಜೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅಲರ್ಟ್ ಆಗಿದ್ದಾರೆ. ಇತ್ತ ಸಂಪುಟದ ಸಹೋದ್ಯೋಗಿಗಳೂ ಸಹ ಡಿಕೆ ಶಿವಕುಮಾರ್ ಅವರ ಮೇಲೆ ವಿಶೇಷ ನಿಗಾ ಇರಿಸಿದ್ದಾರೆ. ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಡಿಕೆ ಶಿವಕುಮಾರ್ ಅವರು ಪ್ರಸ್ತಾಪಿಸಿದ್ದರು. ಹೀಗಾಗಿ ಸಚಿವ ಸಂಪುಟದ ಸಚಿವರ ಕಣ್ಣು ಶಿವಕುಮಾರ್ ಮೇಲಿದೆ.
ಕಳೆದ ವಾರ ಡಾ. ಜಿ ಪರಮೇಶ್ವರ್ ಆಯೋಜಿಸಿದ್ದ ಡಿನ್ನರ್ ಮೀಟಿಂಗ್ ಅನ್ನು ತಡೆಯುವಲ್ಲಿ ಡಿ ಕೆ ಶಿವಕುಮಾರ್ ಅವರು ಸಕ್ಸಸ್ ಆಗಿದ್ದರು. ಸಚಿವರ ಗೌಪ್ಯ ಸಭೆಗಳಿಗೆ ಹೈಕಮಾಂಡ್ ಮೂಲಕ ಬ್ರೇಕ್ ಹಾಕಿಸಿದ್ದರು ಕೆಪಿಸಿಸಿ ಸಾರಥಿ. ಹೀಗಾಗಿ ಸಂಕ್ರಾಂತಿ ಬಳಿಕ ಮಹತ್ವದ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾದ್ರೆ ದೆಹಲಿ ಪ್ರವಾಸದ ವೇಳೆ ಡಿಸಿಎಂ ಡಿಕೆಗೆ ಏನಾದ್ರು ಸುಳಿವು ಸಿಕ್ಕಿದ್ಯಾ? ಹೈಕಮಾಂಡ್ ಜೊತೆಗೆ ಪವರ್ ಶೇರಿಂಗ್ ಬಗ್ಗೆ ಚರ್ಚೆ ಮಾಡಿದ್ರಾ ಡಿಸಿಎಂ ಡಿಕೆಶಿ ಎಂಬುದು ಭಾರೀ ಚರ್ಚೆ ಆಗುತ್ತಿದೆ. ಅಧಿಕಾರ ಹಂಚಿಕೆಯ ಬಗ್ಗೆ ಮಹತ್ವದ ಚರ್ಚೆ ಏನಾದರೂ ನಡೆದಿದ್ಯಾ? ಡಿಸಿಎಂ ಡಿಕೆಶಿ ಪೂಜೆ ಮಾಡಿಸಿದ ಹಿಂದಿನ ಉದ್ದೇಶ ಅಧಿಕಾರಕ್ಕಾಗಿಯೆನಾ ಎಂಬುದರ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ.