ವಾಷಿಂಗ್ಟನ್ :ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕರಿಸಿದರು. ವಾಷಿಂಗ್ ಟನ್ ಡಿಸಿಯ ಕ್ಯಾಪಿಟಲ್ ಹಿಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್ ಅವರು ಪ್ರಮಾಣ ವಚನ ಬೋಧಿಸಿದರು. 40 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಪ್ರಮಾಣವಚನ ಸ್ವೀಕಾರ ಸಮಾರಂಭ ಕ್ಯಾಪಿಟಲ್ ರೊಟುಂಡಾ ಒಳಾಂಗಣ ಸಭಾಂಗಣದಲ್ಲಿ ನಡೆದಿದೆ.
ಟ್ರಂಪ್ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಬಳಿಕ ಅಮೆರಿಕವನ್ನುದ್ದೇಶಿ ಮೊದಲ ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್, ಇದು ಅಮೆರಿಕದ ಸ್ವರ್ಣ ಯುಗ ಎಂದು ಬಣ್ಣಿಸಿದ್ದಾರೆ. ಹಲವು ಸವಾಲುಗಳು ನಮ್ಮ ಮುಂದಿದೆ. ಆದರೆ ಯುನೈಟೆಡ್ ಸ್ಟೇಟ್ಸ್ ಸಮರ್ಥವಾಗಿದೆ. ಹೀಗಾಗಿ ಇದು ಸುವರ್ಣಯುಗದ ಆರಂಭ ಎಂದು ಟ್ರಂಪ್ ಹೇಳಿದ್ದಾರೆ. ಮೊದಲ ಭಾಷಣದಲ್ಲಿ ನುಸುಳುಕೋರರಿಗೆ ಟ್ರಂಪ್ ವಾರ್ನಿಂಗ್ ನೀಡಿದ್ದಾರೆ. ಅಮೆರಿಕವನ್ನು ಸುರಕ್ಷಿತ ತಾಣವಾಗಿ ಮಾಡುವುದು ಗುರಿಯಾಗಿದೆ. ನುಸುಳುಕೋರರಿಗೆ ಅಮೆರಿಕದಲ್ಲಿ ಅವಕಾಶವಿಲ್ಲ ಎಂದು ಖಡಕ್ ಸೂಚನೆ ನೀಡಿದ್ದಾರೆ.
ಡೋನಾಲ್ಡ್ ಟ್ರಂಪ್ ಪ್ರಮಾಣವಚನದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭಕೋರಿದ್ದಾರೆ. ಅಮೆರಿದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ನನ್ನ ಆತ್ಮೀಯ ಗೆಳೆಯ ಡೋನಾಲ್ಡ್ ಟ್ರಂಪ್ಗೆ ಶುಭಾಶಯಗಳು. ಮತ್ತೊಮ್ಮೆ ಟ್ರಂಪ್ ಅಧ್ಯಕ್ಷತೆಯ ಅಮೆರಿಕ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಇದು ಉಭಯ ದೇಶಗಳಿಗೆ ನೆರವಾಗಲಿದೆ. ಜೊತೆಗೆ ಉಭಯ ದೇಶಗಳ ಭವಿಷ್ಯಕ್ಕೆ ಪೂರಕವಾಗಿ ಕೆಲಸ ಮಾಡಲು ಸಂತೋಷಪಡುತ್ತೇನೆ. ಯಶಸ್ವಿ ಅವಧಿಗೆ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಟ್ರಂಪ್ ಗೂ ಮುನ್ನ ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸ್ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಭಾರತದ ಉದ್ಯಮಿ ಮುಖೇಶ್ ಅಂಬಾನಿ ಭಾಗಿಯಾಗಿದ್ದರು.
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಟ್ರಂಪ್ ಅವರ ಕುಟುಂಬ ಮತ್ತು ಕ್ಯಾಬಿನೆಟ್ ಸದಸ್ಯರ ಜೊತೆಗೆ, ಎಲೋನ್ ಮಸ್ಕ್, ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ ಟೆಕ್ ಉದ್ಯಮಿಗಳು, ಗಣ್ಯರು ಕ್ಯಾಪಿಟಲ್ನಲ್ಲಿ ಉಪಸ್ಥಿತರಿದ್ದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ; https://whatsapp.com/channel/0029VafyCqRFnSzHn1JWKi1B