ಬೆಂಗಳೂರು: ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ಹಿರಿಯ ರಾಜಕಾರಣಿ ಡಾ.ಮನಮೋಹನ್ ಸಿಂಗ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಡಾ.ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 1970 ರ ದಶಕದಲ್ಲಿ ಅವರು ಭಾರತ ಸರ್ಕಾರದ ಆರ್ಥಿಕ ಸಲಹೆಗಾರರಾಗಿದ್ದರು. ಬಳಿಕ ಆಗಿನ ಪ್ರಧಾನಮಂತ್ರಿ ನರಸಿಂಹ ರಾವ್ ಅವರ ಆರ್ಥಿಕ ಸಲಹೆಗಾರರಾದರು. ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶಕರಾಗಿ ಮತ್ತು ಗವರ್ನರ್ ಆಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.
ಹಿರಿಯರ ಕುಟುಂಬಸ್ಥರು, ಬಂಧುಗಳು, ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ದೇಶದ ಅರ್ಥ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವಹಿಸಿ, ಆರ್ಥಿಕ ಉದಾರೀಕರಣದ ರೂವಾರಿಯಾಗಿ ಭಾರತದ ಬೆಳವಣಿಗೆಗೆ ಅಮೋಘ ಕೊಡುಗೆ ನೀಡಿದ್ದ ವಿಶ್ವ ಕಂಡ ಶ್ರೇಷ್ಠ ಆರ್ಥಿಕ ತಜ್ಞರೂ ಆದ ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುವೆ. ಅವರ ಸರಳತೆ, ಸಜ್ಜನಿಕೆಯಿಂದಾಗಿ ಅಪರೂಪದ ವಿನಯವಂತ ಪಾಂಡಿತ್ಯ ಮೂರ್ತಿಯನ್ನು ಅವರಲ್ಲಿ ಕಾಣುವಂತಾಗಿತ್ತು. ಪಕ್ಷಾತೀತವಾಗಿ ಎಲ್ಲರ ಹೃದಯದಲ್ಲೂ ಸ್ನೇಹದ ಬಾಂಧವ್ಯ ಬೆಸೆದಿದ್ದ ಅವರು ಅಕ್ಷರಶಃ ಅಜಾತಶತ್ರುವಾಗಿದ್ದರು.
ಎಂದೂ ಯಾರೊಂದಿಗೂ ವಿರಸ ಕಟ್ಟಿಕೊಳ್ಳದೇ ಒಬ್ಬ ಶಿಸ್ತು ಬದ್ಧ ಆರ್ಥಿಕ ಸಲಹೆಗಾರರಾಗಿ, ಸರಳತೆಯ ರಾಜಕಾರಣಿಯಾಗಿ, ಭಾರತದ ಪ್ರಧಾನಿಗಳಾಗಿ ಅವರ ಹತ್ತು ವರ್ಷಗಳ ಸುದೀರ್ಘ ಸೇವೆ ಮಹತ್ವದ ಮೈಲಿಗಲ್ಲು. ಭಾರತೀಯ ರಿಸರ್ವ್ ಬ್ಯಾಂಕ್’ನ ಗವರ್ನರ್ ಆಗಿ, ದೇಶದ ವಿತ್ತ ಸಚಿವರಾಗಿ ಅವರು ಇಟ್ಟ ಹೆಜ್ಜೆಗಳು ಆರ್ಥಿಕ ಸುಧಾರಣೆಯ ಮಹತ್ವದ ತಿರುವುಗಳು.
ಜನಸಾಮಾನ್ಯರು, ಕಡು ಬಡವರು ಆರ್ಥಿಕ ಚೇತನ ಹೊಂದುವಂತಾಗಲು ಎಲ್ಲಾ ಹಂತದಲ್ಲೂ ದೇಶಕ್ಕೆ ಬಂಡವಾಳ ಹರಿದುಬರುವಂತಾಗಲು ಮನಮೋಹನ್ ಸಿಂಗ್ ಅವರು ತೋರಿಸಿದ ಆರ್ಥಿಕ ಜಾಣ್ಮೆಯಿಂದಾಗಿ ಭಾರತದ ಕೈಗಾರಿಕೆ, ಕೃಷಿ, ಶಿಕ್ಷಣ, ವಾಣಿಜ್ಯ ಸೇರಿದಂತೆ ಇತರ ಕ್ಷೇತ್ರಗಳು ಚೈತನ್ಯ ತುಂಬಿಕೊಳ್ಳಲು ಕಾರಣವಾಯಿತು.
ಮನಮೋಹನ್ ಸಿಂಗ್ ಅವರ ಅಗಲಿಕೆಯಿಂದ ಒಬ್ಬ ಸಜ್ಜನಿಕೆಯ ಆಡಳಿತಗಾರರನ್ನಷ್ಟೇ ದೇಶ ಕಳೆದುಕೊಂಡಿಲ್ಲ, ಮೃದು ಭಾಷೆಯ ಒಬ್ಬ ಮಹಾನ್ ಶ್ರೇಷ್ಠ ಆರ್ಥಿಕ ತಜ್ಞನನ್ನು ಕಳೆದುಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೂ ಭಾರತದ ಇತಿಹಾಸದಲ್ಲಿ ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವ, ಕೊಡುಗೆ ಹಾಗೂ ಸಾಧನೆಗಳು ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಅಗಲಿದ ಮಹಾನ್ ಚೇತನಕ್ಕೆ ಗೌರವಪೂರ್ವಕ ನಮನಗಳು ಎಂದು ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.
ಪ್ರತಿಭಟನೆ, ಪತ್ರಿಕಾಗೋಷ್ಠಿ ರದ್ದು
ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗ್ ಅವರು ನಿಧನರಾದ ಕಾರಣದಿಂದಾಗಿ ಇಂದು (27-12-2024) ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆಯಬೇಕಿದ್ದ ಪತ್ರಿಕಾಗೋಷ್ಠಿ ಮತ್ತು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಡೆಯಬೇಕಿದ್ದ ಪ್ರತಿಭಟನೆಯನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಕಟಣೆ ತಿಳಿಸಿದೆ.