ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಹಿರಿಯ ಪುತ್ರಿ ಸ್ಯಾಂಡಲ್ವುಡ್ ಪ್ರವೇಶಿಸ್ತಿರೋದು ನಿಮಗೆಲ್ಲ ಗೊತ್ತೆಯಿದೆ. ಗುರುಶಿಷ್ಯರು ಸಿನಿಮಾ ಖ್ಯಾತಿಯ ನಿರ್ದೇಶಕ ಜಡೇಶ್ ಕೆ. ಹಂಪಿ ನಿರ್ದೇಶನದ ಸಿನಿಮಾ ಮೂಲಕ ವಿಜಯ್ ಅವ್ರ ದೊಡ್ಡ ಮಗಳು ರಿತಾನ್ಯಾ ವಿಜಯ್ಕುಮಾರ್ ಕನ್ನಡ ಚಿತ್ರರಂಗಕ್ಕೆ ಇಂಟ್ರುಡ್ಯೂಸ್ ಆಗ್ತಿದ್ದಾರೆ. ವಿಶೇಷ ಅಂದರೆ ರಿಯಲ್ ಲೈಫ್ ಅಪ್ಪ-ಮಗಳು, ರೀಲ್ನಲ್ಲೂ ತಂದೆ-ಮಗಳಾಗಿ ಕಮಾಲ್ ಮಾಡೋದಕ್ಕೆ ಹೊರಟು ನಿಂತಿದ್ದಾರೆ. ಈ ಮಧ್ಯೆ ವಿಜಯ್ ತಮ್ಮ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಕಿರಿಯ ಪುತ್ರಿ ಮೋನಿಷಾನ ಬಣ್ಣದ ಲೋಕಕ್ಕೆ ಪರಿಚಯಿಸಲು ರೆಡಿಯಾಗಿದ್ದಾರೆ. ಗೌರಿ-ಗಣೇಶ ಹಬ್ಬದಂದು ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೂವೀ ಟೈಟಲ್ ರಿವೀಲ್ ಮಾಡುವ ಮೂಲಕ ಸರ್ ಪ್ರೈಸ್ ಕೊಟ್ಟಿದ್ದಾರೆ
ಯಸ್, ದುನಿಯಾ ವಿಜಯ್ ಕಿರಿಯ ಪುತ್ರಿ ಮೋನಿಷಾ ʻಸಿಟಿ ಲೈಟ್ಸ್ʼ ಹೆಸರಿನ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಸಿನಿಜರ್ನಿ ಶುರು ಮಾಡ್ತಿದ್ದಾರೆ. ಫಸ್ಟ್ ಲುಕ್ ಮೂಲಕವೇ ನೋಡುಗರ ಗಮನ ಸೆಳೆಯುವಲ್ಲಿ ಸಿಟಿ ಲೈಟ್ಸ್ ಯಶಸ್ವಿಯಾಗಿದೆ. ಅಂದ್ಹಾಗೇ, ಈ ಚಿತ್ರಕ್ಕೆ ʻಜವಾಬ್ ದಾರಿ.. ದೀಪಗಳುʼ ಅನ್ನೋ ಟ್ಯಾಗ್ಲೈನ್ ಕೊಡಲಾಗಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಇಂಟ್ರೆಸ್ಟಿಂಗ್ ಅಂದರೆ ಈ ಸಿನಿಮಾವನ್ನ ವಿಜಯ್ ಅವ್ರೇ ಡೈರೆಕ್ಟ್ ಮಾಡ್ತಿದ್ದಾರೆ. ಸಲಗ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕನಾಗಿ ಗೆದ್ದು ಬೀಗಿದ ವಿಜಯ್, ಭೀಮ ಎಂಬ ಬ್ಲಾಕ್ಬಸ್ಟರ್ ಹಿಟ್ ಕೊಟ್ಟು ಮಗದೊಮ್ಮೆ ತಮ್ಮ ತಾಕತ್ತೇನು ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟು ಮಗಳನ್ನ ಇಂಟ್ರುಡ್ಯೂಸ್ ಮಾಡೋದಕ್ಕೆ ಮುಂದಾಗಿದ್ದಾರೆ.
ಅಂದ್ಹಾಗೇ, ವಿಜಯ್ ನಿರ್ದೇಶನದ ಎರಡು ಸಿನಿಮಾಗಳು ಸೂಪರ್ ಹಿಟ್ ಆಗಿರೋದ್ರಿಂದ ಮೂರನೇ ಚಿತ್ರದ ಮೇಲೆ ಸಹಜವಾಗಿ ಕುತೂಹಲ ಹೆಚ್ಚಿದೆ. ಮಗಳ ಸಿನಿಮಾಗೆ ಆಕ್ಷನ್ ಕಟ್ ಹೇಳಿ ಹ್ಯಾಟ್ರಿಕ್ ಬಾರಿಸೋದು ಪಕ್ಕಾ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗ್ತಿದೆ. ಇನ್ನೂ ಅಪ್ಪನ ಡೈರೆಕ್ಷನ್ನಲ್ಲೇ ಇಂಡಸ್ಟ್ರಿಗೆ ಲಾಂಚ್ ಆಗ್ತಿರುವ ಮೋನಿಷಾ ಸಕಲ ತಯಾರಿ ಮಾಡ್ಕೊಂಡೇ ಫೀಲ್ಡಿಗಿಳಿಯುತ್ತಿದ್ದಾರೆ. ಬಾಲ್ಯದಿಂದಲೂ ನಟಿಯಾಗುವ ಕನಸು ಕಂಡಿದ್ದ ಮೋನಿಷಾ, ಬೆಂಗಳೂರಿನಲ್ಲಿ ಬ್ಯಾಚುಲರ್ ಆಫ್ ಥಿಯೇಟರ್ ಕೋರ್ಸ್ ಮುಗಿಸಿದ್ದರು. ಅನಂತರ ನ್ಯೂಯಾರ್ಕ್ನಂತಹ ಮಹಾನಗರದಲ್ಲಿ ಅಭಿನಯ ತರಭೇತಿ ಪಡೆದುಕೊಂಡಿದ್ದಾರೆ. ಕ್ಯಾಮೆರಾ ಎದುರಿಸಬಲ್ಲೇ ಎನ್ನುವ ಆತ್ಮವಿಶ್ವಾಸ ಬಂದ್ಮೇಲೆಯೇ ಮೋನಿಷಾ ಬಣ್ಣ ಹಚ್ಚಲು ಸೈ ಎಂದಿದ್ದಾರೆ.
ಮೊನಿಷಾ ವಿಜಯ್ ಚಿಕ್ಕಂದಿನಿಂದಲೂ ಹೈಪರ್ ಆಕ್ಟಿವ್. ಸಿನಿಮಾರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಫ್ಯಾಷನ್ ಡಿಸೈನರ್ ಆಗಿದ್ದರು. ಫ್ಯಾಷನ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಮೊನಿಷಾ ತಮ್ಮದೇ ಬ್ರ್ಯಾಂಡ್ ಒಂದನ್ನು ಹುಟ್ಟಾಕಿದ್ದರು. ಅದಕ್ಕೆ ‘ಶುಗರ್ ಬೈ ಮೊನಿಷಾ’ ಅಂತಲೂ ಹೆಸರಿಟ್ಟಿದ್ದರು. ತಮ್ಮ ಡಿಸೈನರ್ ವೇರ್ಗಳನ್ನು ಮಾರುಕಟ್ಟೆಗೂ ಮೊನಿಷಾ ಬಿಟ್ಟಿದ್ದರು. ಅಷ್ಟೇ ಅಲ್ಲ ಮೊನಿಷಾ ಕೆಲವು ಫ್ಯಾಷನ್ ಶೋಗಳಲ್ಲಿ ರ್ಯಾಂಪ್ ವಾಕ್ ಕೂಡ ಮಾಡಿದ್ದಾರೆ. ಇದೀಗ ನಟಿಯಾಗಿ ಲಾಂಚ್ ಆಗ್ತಿರುವ ಖುಷಿಯನ್ನ ತಮ್ಮ ಸೋಷಿಯಲ್ ಪುಟದಲ್ಲಿ ಹಂಚಿಕೊಂಡಿದ್ದಾರೆ. “ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಶುಭ ದಿನದಂದು ನಿಮ್ಮೊಂದಿಗೆ ನನ್ನ ಮೊದಲನೆಯ ಚಿತ್ರ ‘ಸಿಟಿ ಲೈಟ್ಸ್’ನ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಿದ್ದೇನೆ. ‘ಸಲಗ’ ಹಾಗೂ ‘ಭೀಮ’ ಸಿನಿಮಾದ ಯಶಸ್ಸಿನ ನಂತರ ನನ್ನ ಅಪ್ಪ ವಿಜಯಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ ಇದಾಗಿದೆ. ಇಂತಹ ಅದ್ಭುತ ತಂಡದೊಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಮತ್ತು ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ. ಧನ್ಯವಾದಗಳು” ಎಂದು ಚೊಚ್ಚಲ ಸಿನಿಮಾದ ಬಗ್ಗೆ ಬರೆದುಕೊಂಡಿದ್ದಾರೆ.