ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 2024 ಹಾಗೂ 2025ನೇ ಸಾಲಿನ ಅಧ್ಯಕ್ಷರು, ಪದಾಧಿಕಾರಿ ಹಾಗೂ ಸದಸ್ಯರ ಆಯ್ಕೆಗಾಗಿ ಶನಿವಾರ ಚುನಾವಣೆ ನಡೆಯಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಶನಿವಾರ ಬೆಳಗ್ಗೆ ಆರಂಭವಾಗಿದೆ. ಮತದಾನ ಸಂಜೆವರೆಗೂ ನಡೆಯಲಿದೆ.
ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 8 ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು, ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ವಲಯ ನಾಲ್ಕು ಮಂದಿ, ವಿತರಕ ಹಾಗೂ ಪ್ರದರ್ಶಕರ ವಲಯದಿಂದ ತಲಾ ಮೂವರು, ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ನಾಲ್ಕು, ವಿತರಕ ಹಾಗೂ ಪ್ರದರ್ಶಕ ವಲಯದಿಂದ ತಲಾ ಮೂವರು, ಖಜಾಂಚಿ ಸ್ಥಾನಕ್ಕೆ ಮೂವರು ಸ್ಪರ್ಧಿಸಿದ್ದಾರೆ.