ಬಿಗ್ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಓಪನಿಂಗ್ಗೆ ಇನ್ನೊಂದು ದಿನ ಬಾಕಿಯಿದೆ. ಅದಕ್ಕೂ ಮುನ್ನ ಕೆಲ ಸ್ಪರ್ಧಿಗಳ ಹೆಸರು ಬಹಿರಂಗವಾಗಿದೆ. ಅದರಲ್ಲಿ ಕೆಲವರನ್ನು ಸ್ವರ್ಗಕ್ಕೆ ಕಳುಹಿಸಬೇಕಾ? ಅಥವಾ ನರಕಕ್ಕೆ ಕಳುಹಿಸಬೇಕಾ? ಎಂದು ಹೇಳುವಂತೆ ವೀಕ್ಷಕರಿಗೆ ಮನವಿ ಮಾಡಲಾಗಿದೆ.
ವೀಕ್ಷಕರು ವೋಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸಬಹುದು. ಗೌತಮ್ ಜಾಧವ್, ವಕೀಲ ಜಗದೀಶ್, ಚೈತ್ರಾ ಕುಂದಾಪುರ ಬಳಿಕ ಗೋಲ್ಡ್ ಸುರೇಶ್ ಈ ಬಾರಿ ಬಿಗ್ಬಾಸ್ ಮನೆಗೆ ಹೋಗಿದ್ದಾರೆ. ಬೆಳಗಾವಿಯ ಅಥಣಿ ತಾಲೂಕಿನ ಕುಗ್ರಾಮದಲ್ಲಿ ಹುಟ್ಟಿದ ಸುರೇಶ್ ಮುಂದೆ ಬೆಂಗಳೂರಿಗೆ ಬಂದು ಸಾಧಿಸಿ ತೋರಿಸಿದವರು.
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಬಳಿಕ ಕೆಲಸ ಬಿಟ್ಟು ಕ್ರಿಯೇಟಿವ್ ಇಂಟೀರಿಯರ್ ಸಂಸ್ಥೆ ಸ್ಥಾಪಿಸಿ ಗೆದ್ದರು. ಏನಾದರೂ ಸಾಧಿಸಬೇಕು ಎನ್ನುವ ಛಲದಿಂದ ಹುಟ್ಟಿದ ಊರು ಬಿಟ್ಟು ಓಡಿ ಬಂದ ಸುರೇಶ್ ಮುಂದೆ ತಮ್ಮದೇ ಸಂಸ್ಥೆ ಸ್ಥಾಪಿಸಿ ಸಾಕಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ. ಇತ್ತೀಚೆಗೆ ಜೀ ನ್ಯೂಸ್ ಯುವರತ್ನ ಅವಾರ್ಡ್ ಕೂಡ ಪಡೆದಿದ್ದರು.
ಸದಾ ಮೈಮೇಲೆ ಚಿನ್ನ ಹಾಕಿಕೊಂಡು ಸುರೇಶ್ ಓಡಾಡುತ್ತಾರೆ. ಕುತ್ತಿಗೆಯಲ್ಲಿ ಚಿನ್ನದ ಸರಗಳು, ಕೈಯಲ್ಲಿ ಚಿನ್ನದ ಬ್ರೇಸ್ಲೈಟ್, ಉಂಗುರಗಳು ಹೀಗೆ ಚಿನ್ನ ಅಂದ್ರೆ ಬಹಳ ಅಚ್ಚುಮೆಚ್ಚು. ಅದೇ ಕಾರಣಕ್ಕೋ ಏನೋ ಅವರನ್ನು ಗೋಲ್ಡ್ ಸುರೇಶ್ ಎಂದೇ ಕೆಲವರು ಕರೆಯುತ್ತಾರೆ. ಅದೇ ಹೆಸರಿನಲ್ಲಿ ಅವರು ಗುರ್ತಿಸಿಕೊಂಡಿದ್ದಾರೆ. ಗೋಲ್ಡ್ ಸುರೇಶ್ ಎನ್ನುವ ಹೆಸರಿನಲ್ಲೇ ಸೋಶಿಯಲ್ ಮೀಡಿಯಾ ಅಕೌಂಟ್ಗಳಿವೆ.
ಇನ್ಸ್ಟಾಗ್ರಾಮ್ನಲ್ಲಿ ಸಾಕಷ್ಟು ರೀಲ್ಸ್ ವೀಡಿಯೋಗಳನ್ನು ಗೋಲ್ಡ್ ಸುರೇಶ್ ಹಂಚಿಕೊಂಡಿದ್ದಾರೆ. ಬಿಗ್ಬಾಸ್ ಸೀಸನ್ 10ರಲ್ಲಿ ವರ್ತೂರ್ ಸಂತೋಷ್ ವಿಭಿನ್ನ ರೀತಿಯಲ್ಲಿ ಸದ್ದು ಮಾಡಿದ್ದರು. ಹಳ್ಳಿ ಭಾಷೆ, ವೈಟ್ ಅಂಡ್ ವೈಟ್ ಡ್ರೆಸ್ನಲ್ಲಿ ಎಂಟ್ರಿ ಕೊಟ್ಟಿದ್ದರು. ಶ್ರೀಮಂತ ಮನೆಯ ಕುಟುಂಬದಿಂದ ಬಂದಿದ್ದ ಅವರು ಚಿನ್ನವನ್ನು ಮೈಮೇಲೆ ಧರಿಸಿ ಮಿಂಚಿದ್ದರು.
ವರ್ತೂರ್ ಸಂತೋಷ್ ಅವರನ್ನು ಹೋಲುವ ಗೋಲ್ಡ್ ಸುರೇಶ್ ಈ ಬಾರಿ ದೊಡ್ಮನೆಗೆ ಕಾಲಿಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಕಾರು ಹಾಗೂ ಚಿನ್ನದ ಬಗ್ಗೆ ಅಪಾರ ಒಲವು ಇರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಂದಾಜು 2 ಕೋಟಿ ರೂ. ಮೌಲ್ಯದ ಚಿನ್ನವನ್ನು ಅವರು ಧರಿಸಿ ಓಡಾಡುತ್ತಾರೆ ಎನ್ನುವ ಅಂದಾಜಿದೆ. ನಮ್ಮ ಪತ್ನಿ ಚೆನ್ನಾಗಿ ಓದಿದ್ದಾರೆ, ನಾನು ಅಷ್ಟಾಗಿ ಓದಿಲ್ಲ, ನಾನು ಚಿನ್ನ ಧರಿಸಿ ಓಡಾಡುವುದು, ದುಬಾರಿ ಕಾರ್ ಕೊಂಡುಕೊಳ್ಳುವುದು ಆಕೆಗೆ ಇಷ್ಟವಾಗಲ್ಲ ಎಂದಿದ್ದಾರೆ.
ಹೆಣ್ಣು ಮಗು ಬೇಕು ಎಂದು ಬಯಸಿದ್ದೆ. ಮಗಳು ಹುಟ್ಟಿದಳು ಎಂದು ಗೋಲ್ಡ್ ಸುರೇಶ್ ಹೇಳಿಕೊಂಡಿದ್ದಾರೆ. ನಾವೆಲ್ಲಾ ಬಿಗ್ಬಾಸ್ ಮನೆಗೆ ಹೋಗುವುದು ಸಾಧ್ಯನಾ? ಎಂದುಕೊಂಡಿದ್ದೆ. ಈಗ ಅವಕಾಶ ಸಿಕ್ಕಿದೆ. ನಮ್ಮತನ ತೋರಿಸಬೇಕು ಎಂದು ಅವರು ಹೇಳಿರುವುದು ಪ್ರೋಮೊದಲ್ಲಿ ನೋಡಬಹುದು.