ಜನಪ್ರಿಯ ಬಾಲಿವುಡ್ ಗಾಯಕ ಉದಿತ್ ನಾರಾಯಣ್ ಅವರು ಇತ್ತೀಚೆಗೆ ಲೈವ್ ಕನ್ಸರ್ಟ್ ಒಂದರಲ್ಲಿ ಮಹಿಳಾ ಅಭಿಮಾನಿಗಳಿಗೆ ಮುತ್ತಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ಅದರ ಬೆನ್ನಲ್ಲೇ ತನ್ನ ನಡೆಯನ್ನು ನಾರಾಯಣ್ ಅವರು ಸಮರ್ಥಿಸಿಕೊಂಡಿದ್ದಾರೆ.
ಲೈವ್ ಕನ್ಸರ್ಟ್ನಲ್ಲಿ ಉದಿತ್ ನಾರಾಯಣ್ ಅವರು 1994ರಲ್ಲಿ ತೆರೆಕಂಡ ಮೊಹ್ರಾ ಸಿನಿಮಾದ ‘ಟಿಪ್ ಟಿಪ್ ಬರ್ಸಾ ಪಾನಿ’ ಎಂಬ ಹಿಟ್ ಹಾಡನ್ನು ಹಾಡುತ್ತಿದ್ದಾಗ ಅಭಿಮಾನಿಗಳು ಸೆ ತೆಗೆದುಕೊಳ್ಳಲು ವೇದಿಕೆಯ ಬಳಿ ಬಂದರು. ಈ ವೇಳೆ ಸೆಲ್ಪಿಗೆ ಪೋಸ್ ಕೊಟ್ಟ ನಾರಾಯಣ್ ಮಹಿಳಾ ಅಭಿಮಾನಿಗಳ ತುಟಿಗೆ ಚುಂಬಿಸಿದರು. ಮೊದಲು ಕೆನ್ನೆಗೆ ಕೊಟ್ಟು ನಂತರ ತುಟಿಗೆ ಮುತ್ತಿಟ್ಟರು.
ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಾರಾಯಣ್ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ ಬಾಲಿವುಡ್ ಹಂಗಾಮಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿರುವ ನಾರಾಯಣ್, ನಾನು ನಡೆದುಕೊಂಡ ರೀತಿಯು ಅಭಿಮಾನಿಗಳ ಮೇಲೆ ನನಗಿರುವ ಪ್ರೀತಿಯ ತೋರ್ಪಡಿಕೆ ಎಂದರು.
ನಾನು ಎಂದಾದರೂ ನನಗೆ, ನನ್ನ ಕುಟುಂಬಕ್ಕೆ ಅಥವಾ ನನ್ನ ದೇಶಕ್ಕೆ ಅವಮಾನವಾಗುವಂತೆ ಏನಾದರೂ ಮಾಡಿದ್ದೇನೆಯೇ? ಎಂದು ಉದಿತ್ ನಾರಾಯಣ್ ಪ್ರಶ್ನೆ ಮಾಡಿದಾಗ, ನೀವು ಮಾಡಿಲ್ಲ ಎಂದು ಸಂದರ್ಶಕರು ಉತ್ತರಿಸಿದರು. ಬಳಿಕ ಮಾತು ಮುಂದುವರಿಸಿದ ಉದಿತ್ ನಾರಾಯಣ್, ಹಾಗಾದರೆ ನಾನು ನನ್ನ ಜೀವನದ ಈ ಹಂತದಲ್ಲಿ ಎಲ್ಲವನ್ನೂ ಸಾಧಿಸಿರುವಾಗ ನಾನೇಕೆ ಅವಮಾನಕರ ರೀತಿಯಲ್ಲಿ ನಡೆದುಕೊಳ್ಳಬೇಕು?
ನನ್ನ ಅಭಿಮಾನಿಗಳು ಮತ್ತು ನನ್ನ ನಡುವೆ ಆಳವಾದ, ಶುದ್ಧವಾದ ಮತ್ತು ಮುರಿಯಲಾಗದ ಬಂಧವಿದೆ. ವಿಡಿಯೋದಲ್ಲಿ ನೀವು ನೋಡಿದ್ದು ನನ್ನ ಅಭಿಮಾನಿಗಳು ಮತ್ತು ನನ್ನ ನಡುವಿನ ಪ್ರೀತಿಯ ಅಭಿವ್ಯಕ್ತಿಯಾಗಿದೆ. ಅವರು ನನ್ನನ್ನು ಪ್ರೀತಿಸುತ್ತಾರೆ ಮತ್ತು ನಾನು ಕೂಡ ಅವರನ್ನು ಹೆಚ್ಚು ಪ್ರೀತಿಸುತ್ತೇನೆ ಎಂದರು.
ವಿಡಿಯೋ ಬಿಡುಗಡೆಯಾದ ಸಮಯದ ಬಗ್ಗೆ ಉದಿತ್ ನಾರಾಯಣ್ ಅನುಮಾನ ವ್ಯಕ್ತಪಡಿಸಿದರು. ಸಂಗೀತ ಕಚೇರಿ ಮುಗಿದ ತಿಂಗಳುಗಳ ನಂತರ ವಿಡಿಯೋ ಏಕೆ ಈಗ ಕಾಣಿಸಿಕೊಂಡಿತು ಎಂದು ಪ್ರಶ್ನಿಸಿದರು. ವಿಡಿಯೋ ಇದ್ದಕ್ಕಿದ್ದಂತೆ ಏಕೆ ಕಾಣಿಸಿಕೊಂಡಿತು, ಅದೂ ಕೆಲವು ತಿಂಗಳ ಹಿಂದೆ ಯುಎಸ್ ಅಥವಾ ಕೆನಡಾದಲ್ಲಿ ನಡೆದ ಸಂಗೀತ ಕಚೇರಿಗೆ ಸಂಬಂಧಿಸಿದ ವಿಡಿಯೋ? ಕಿಡಿಗೇಡಿಗಳಿಗೆ ನಾನು ಹೇಳಲು ಬಯಸುತ್ತೇನೆ. ನೀವು ನನ್ನನ್ನು ಕೆಳಕ್ಕೆ ಎಳೆಯಲು ಪ್ರಯತ್ನಿಸಿದರೆ, ನಾನು ಮೇಲಕ್ಕೆ ಹೋಗುತ್ತೇನೆ ಎಂದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc