ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್ 10 ಕಾರ್ಯಕ್ರಮದಲ್ಲಿ ಹುಲಿ ಉಗುರು ಧರಿಸಿದ್ದ ಎಂಬ ಕಾರಣಕ್ಕೆ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಬಿಗ್ ಮನೆಗೆ ಬಂದು ಪೊಲೀಸರು ಅರೆಸ್ಟ್ ಮಾಡಿದ್ದರು. ಬಳಿಕ ತನಿಖೆ ಎದುರಿಸಿ ಬಿಗ್ ಬಾಸ್ ಮನೆಯನ್ನು ವಾಪಾಸ್ ಹೊಕ್ಕರು. ಆದರೀಗ ಮತ್ತದೇ ಘಟನೆಯೊಂದು ಈ ಬಾರಿಯ ಬಿಗ್ ಬಾಸ್ನಲ್ಲಿ ಬೆಳಕಿಗೆ ಬಂದಿದೆ.
ಬಿಗ್ ಬಾಸ್ ಸೀಸನ್ 11 ಪ್ರಾರಂಭವಾಗಿದೆ. ಬೆಳಗಾವಿ ಮೂಲದ ಗೋಲ್ಡ್ ಸುರೇಶ್ ಎಂಬುವರು ದೊಡ್ಮನೆಯೊಳಕ್ಕೆ ಹೋಗಿದ್ದಾರೆ. ಆದರೀಗ ಬಿಗ್ ಬಾಸ್ ಮನೆಹೊಕ್ಕ ಸುರೇಶ್ಗಿಂತ ಅವರ ಮೈಮೇಲಿರುವ ಗೋಲ್ಡ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅದರಲ್ಲೂ ಅವರ ಜೊತೆಯಿರುವ ಹುಲಿ ಉಗುರಿನಂತೆ ಕಾಣುತ್ತಿರುವ ಪೆಂಟೆಂಡ್ ಈಗ ಚರ್ಚೆಗೆ ಗ್ರಾಸವಾಗಿದೆ.
ವರ್ತೂರ್ ಸಂತೋಷ್ ಹುಲಿ ಉಗುರು ಧರಿಸಿ ಸಂಕಷ್ಟಕ್ಕೆ ಒಳಗಾಗಿದ್ದರು. ಆದರೀಗ ಗೋಲ್ಡ್ ಸುರೇಶ್ ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಅದರಲ್ಲೂ ಬಿಗ್ ಬಾಸ್ ವಿಡಿಯೋ ಟೇಪ್ನಲ್ಲೂ ಹುಲಿ ಉಗುರಿನ ಪೆಂಟೆಂಟ್ ಚಿತ್ರ ಸೆರೆಯಾಗಿದೆ. ಸದ್ಯ ಅರಣ್ಯ ಇಲಾಖೆಯವರು ಅಲರ್ಟ್ ಆಗಿದ್ದು, ಇದು ಅಸಲಿಯೋ? ನಕಲಿಯೋ ಎಂಬುದನ್ನು ಬಿಗ್ ಬಾಸ್ ಮನೆಗೆ ಹೋಗಿ ಪರಿಶೀಲಿಸಲು ಮುಂದಾಗಿದ್ದಾರೆ.
ಗೋಲ್ಡ್ ಸುರೇಶ್ 10ನೇ ಕ್ಲಾಸ್ವರೆಗೂ ವ್ಯಾಸಂಗ ಮಾಡಿದ್ದು, ಬಳಿಕ ತಮ್ಮ ಹುಟ್ಟೂರು ಬಿಟ್ಟು ಓಡಿ ಬಂದಿದ್ದರಂತೆ. RSS ಸಂಘಟನೆಯ ಕಾರ್ಯಕರ್ತನೂ ಹೌದು. ಹಿಂದೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಆ ಕೆಲಸ ಬಿಟ್ಟು ಕ್ರಿಯೇಟಿವ್ ಇಂಟೀರಿಯರ್ ಸಂಸ್ಥೆ ಸ್ಥಾಪನೆ ಮಾಡಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾರೆ. ಗೋಲ್ಡ್ ಸುರೇಶ್ ಬೆಳಗಾವಿ ಮೂಲದವರಾಗಿದ್ದು, ಸಾಮಾನ್ಯ ಬಡ ರೈತನ ಮಗ. ದೇಹದ ಪೂರ್ತಿ ಸುಮಾರು ಒಂದೂವರೆಯಿಂದ ಎರಡೂವರೆ ಕೋಟಿ ಚಿನ್ನವನ್ನು ಧರಿಸಿದ್ದಾರೆ. ಮಾತ್ರವಲ್ಲದೆ 4ರಿಂದ 5 ಜನರು ಬಾಡಿಗಾರ್ಡ್ ಮತ್ತು 2 ಜನರು ಗನ್ ಮ್ಯಾನ್ ಇಟ್ಟುಕೊಂಡಿದ್ದಾರೆ.
ವಿಷಯ ಸೂಚನೆ: ಹುಲಿ ಬೇಟೆ ಮತ್ತು ಅದರ ಚರ್ಮ, ಉಗುರು ಇತ್ಯಾದಿಗಳನ್ನು ಮಾರಾಟ ಮಾಡುವುದು ಕಾನೂನು ಅಪರಾಧ. ಶಿಕ್ಷೆ ಕಂಡಿತ. ಆದರೆ ಕೆಲವರು ಕಾನೂನಿನ ಬಗ್ಗೆ ಗಂಧಗಾಳಿ ತಿಳಿಯದವರು ಹುಲಿ ಉಗುರು ಧರಿಸುತ್ತಿದ್ದರು. ಯಾವಾಗ ವರ್ತೂರು ಸಂತೋಷ್ ಅವರನ್ನು ಪೊಲೀಸ್ ಅರೆಸ್ಟ್ ಮಾಡಿ ಹುಲಿ ಉಗುರಿನ ಬಗ್ಗೆ ತನಿಖೆ ನಡೆಸಿದ ಬಳಿಕ ಬಹುತೇಕರು ಪ್ರಾಣಿಗಳಿಂದ ತಯಾರಿಸುವ ಆಭರಣಗಳನ್ನು ಧರಿಸುವುದು ನಿಲ್ಲಿಸಿದ್ದಾರೆ.