‘ಇದು ಹೊಸ ಅಧ್ಯಾಯ’ ಎನ್ನುತ್ತ ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಆರಂಭ ಆಗುತ್ತಿದೆ. ಸೆಪ್ಟೆಂಬರ್ 29ರ ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ಸತತ 11ನೇ ಸೀಸನ್ಗೆ ನಿರೂಪಕನಾಗಿ ಮುಂದುವರಿದಿದ್ದಾರೆ. ಎಂದಿನಂತೆ ಭಾರಿ ಉತ್ಸಾಹದೊಂದಿಗೆ ಅವರು ಶೋ ನಡೆಸಿಕೊಡಲು ಬಂದಿದ್ದಾರೆ. ಮೊದಲ ಸಂಚಿಕೆಯ ಝಲಕ್ ಕಾಣಿಸಿದೆ.
ಈ ಬಾರಿ ಬಿಗ್ ಬಾಸ್ ಮನೆ ಎರಡು ಭಾಗ ಆಗಿದೆ. ಒಂದು ಭಾಗದಲ್ಲಿ ಸ್ವರ್ಗ ಇದೆ. ಇನ್ನೊಂದು ಭಾಗದಲ್ಲಿ ನರಕ ಇದೆ. ಯಾವ ಸ್ಪರ್ಧಿ ಸ್ವರ್ಗಕ್ಕೆ ಹೋಗುತ್ತಾರೆ ಮತ್ತು ಯಾವ ಸ್ಪರ್ಧಿ ನರಕಕ್ಕೆ ಹೋಗುತ್ತಾರೆ ಎಂಬುದನ್ನು ತಿಳಿಯಲು ವೀಕ್ಷಕರು ಕಾಯುತ್ತಿದ್ದಾರೆ.
ಇದು ಬಿಗ್ ಬಾಸ್ನಲ್ಲಿ ಹೊಸ ಕಾನ್ಸೆಪ್ಟ್. ಇಷ್ಟು ಸೀಸನ್ಗಳಲ್ಲಿ ಸ್ವರ್ಗ ಮತ್ತು ನರಕ ಎಂಬ ಪರಿಕಲ್ಪನೆ ಇರಲಿಲ್ಲ. ಈ ಬಾರಿ ಇದನ್ನು ಹೊಸದಾಗಿ ಪರಿಚಯಿಸಲಾಗಿದೆ. ಆ ಕಾರಣದಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಕುತೂಹಲ ಮೂಡಿಸಿದೆ.
ಬಿಗ್ ಬಾಸ್ ಮನೆಯನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಆಟವೂ ಬದಲಾಗುತ್ತಿದೆ. ಹೊಸ ಹೊಸ ನಿಯಮಗಳು ಇರಲಿವೆ. ಶುರುವಿನಿಂದಲೇ ಎರಡು ಗುಂಪುಗಳಲ್ಲಿ ಆಟ ಆರಂಭ ಆಗಲಿದೆ. ಅನೇಕ ಸರ್ಪ್ರೈಸ್ ಕೂಡ ಈ ಶೋನಲ್ಲಿ ಇರಲಿವೆ.
ಹೊಸ ಸೀಸನ್ನ ಬಿಗ್ ಬಾಸ್ ಮನೆ ನೋಡಿ ವೀಕ್ಷಕರು ವಾವ್ ಎನ್ನುತ್ತಿದ್ದಾರೆ. ‘ಕಲರ್ಸ್ ಕನ್ನಡ’ ಮತ್ತು ‘ಜಿಯೋ ಸಿನಿಮಾ’ ಒಟಿಟಿ ಮೂಲಕ ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಪ್ರಸಾರ ಆಗಲಿದೆ.