ವಿಜಯಪುರ: ಬ್ರಿಗೇಡ್ ರಚನೆ ಕುರಿತು ಇಂದು ಬಾಗಲಕೋಟೆಯಲ್ಲಿ ನಡೆಯಲಿರುವ ಚಿಂತನ ಮಂಥನ ಸಭೆ ಪ್ರಮುಖವಾಗಿದ್ದು, ಈ ಸಭೆಯಲ್ಲಿಯೇ ಬ್ರಿಗೇಡ್ಗೆ ಅಂತಿಮ ರೂಪುರೇಷೆ ಕೊಡಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಹಿಂದುತ್ವವಾದಿಗಳಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಈಶ್ವರಪ್ಪನವರ ಕೈಯಲ್ಲಿ ಖಡ್ಗ ಕೊಟ್ಟಿದ್ದೇವೆ. ಒಬ್ಬರ ಮೈಯಲ್ಲಿ ಕಿತ್ತೂರ ರಾಣಿ ಚೆನ್ನಮ್ಮನ ರಕ್ತ ಹರಿಯುತ್ತಿದ್ದರೆ, ಇನ್ನೊಬ್ಬರ ಮೈಯಲ್ಲಿ ಸಂಗೊಳ್ಳಿ ರಾಯಣ್ಣನ ರಕ್ತ ಹರಿಯುತ್ತಿದೆ.
ಇಬ್ಬರೂ ಹಿಂದುತ್ವ ಉಳಿಸಲು ಪ್ರಯತ್ನಿಸಲಿ. ನಾವು ಇವರ ಬೆನ್ನ ಹಿಂದೆ ಇರುತ್ತೇವೆ ಎಂದು ಹೇಳಿ ಹರಸಿದ್ದಾರೆ. ಆ ಕಾರಣಕ್ಕೆ ನಾವು ಬ್ರಿಗೇಡ್ ಮಾಡಲು ಮುಂದಾಗಿದ್ದೇವೆ. ಭಾನುವಾರದಂದು ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ 100 ಜನ ಸಾಧುಸಂತರು ಸೇರಿ ಸುಮಾರು 2,500 ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಸೇರಲಿದ್ದಾರೆ. ಇಂದಿನ ಸಭೆಯಲ್ಲಿ ಬ್ರಿಗೇಡ್ಗೆ ಏನು ಹೆಸರು ಇಡಬೇಕು?. ಬ್ರಿಗೇಡ್ನ ಮುಂದಿನ ಕಾರ್ಯ ಚಟುವಟಿಕೆಗಳು ಹೇಗಿರಬೇಕು ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದರು.