ಫೇಸ್ಬುಕ್ ಕಂಪನಿಯ ಮಾತೃಸಂಸ್ಥೆ ಮೆಟಾಗೆ 800 ಮಿಲಿಯನ್ ಯೂರೋ (ಅಂದಾಜು 7,100 ಕೋಟಿ ರೂ) ದಂಡವನ್ನು ಯುರೋಪಿಯನ್ ಯೂನಿಯನ್ ವಿಧಿಸಿದೆ.
ಆನ್ಲೈನ್ ವರ್ಗೀಕೃತ ಜಾಹೀರಾತುಗಳ ಸೇವೆಯಾದ Facebook Marketplace ಅನ್ನು ಅದರ ವೈಯಕ್ತಿಕ ಸಾಮಾಜಿಕ ನೆಟ್ವರ್ಕ್ ಫೇಸ್ಬುಕ್ಗೆ ಜೋಡಿಸಿದೆ. ಅಷ್ಟೇ ಅಲ್ಲದೇ ಇತರ ಆನ್ಲೈನ್ ವರ್ಗೀಕೃತ ಜಾಹೀರಾತುಗಳ ಸೇವಾ ಪೂರೈಕೆದಾರರ ಮೇಲೆ ವ್ಯಾಪಾರದ ಷರತ್ತನ್ನು ವಿಧಿಸುವ ಮೂಲಕ ತನ್ನ ಆಂಟಿಟ್ರಸ್ಟ್ ನಿಯಮವನ್ನು ಉಲ್ಲಂಘಿಸಿದೆ ಎಂದು ಯುರೋಪಿಯನ್ ಯೂನಿಯನ್ ಹೇಳಿದೆ.
ಎಲ್ಲಾ ಫೇಸ್ಬುಕ್ ಬಳಕೆದಾರರು ಇಷ್ಟವಿಲ್ಲದಿದ್ದರೂ ಫೇಸ್ಬುಕ್ ಮಾರ್ಕೆಟ್ಪ್ಲೇಸ್ಗೆ ಭೇಟಿ ನೀಡುವಂತೆ ರೂಪಿಸಲಾಗಿದೆ. ಯುರೋಪಿಯನ್ ಯೂನಿಯನ್ ನಿಯಮದ ಪ್ರಕಾರ ಒಂದೇ ವೇದಿಕೆಯಲ್ಲಿ ಎರಡು ಸೇವೆಗಳನ್ನು ನೀಡುವಂತಿಲ್ಲ. ಇದೀಗ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮೆಟಾ ತಿಳಿಸಿದೆ.
ಫೇಸ್ಬುಕ್ ತನ್ನ ಮಾರ್ಕೆಟ್ಪ್ಲೇಸ್ ಸೇವೆಯನ್ನು 2016ರಲ್ಲಿ ಆರಂಭಿಸಿತ್ತು. ಒಂದು ವರ್ಷದ ಬಳಿಕ ಹಲವಾರು ಯುರೋಪ್ ರಾಷ್ಟ್ರಗಳಲ್ಲಿ ಈ ಸೇವೆಯನ್ನು ನೀಡತೊಡಗಿದೆ. 27 ರಾಷ್ಟ್ರಗಳ ಯುರೋಪಿಯನ್ ಯೂನಿಯನ್ ಅನ್ನು ನಿಯಂತ್ರಿಸುವ ಆಯೋಗವು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ದೊಡ್ಡ ಟೆಕ್ ಕಂಪನಿಗಳ ಮೇಲೆ ಭಾರೀ ದಂಡವನ್ನು ವಿಧಿಸುತ್ತಿದೆ. ಕಳೆದ ವರ್ಷ ಮೆಟಾದ ಒಟ್ಟು 125 ಬಿಲಿಯನ್ ಯುರೋ ಆದಾಯ ಹೊಂದಿತ್ತು.