ಚಿನ್ನ ಖರೀದಿಸಿ ವಂಚಿಸಿದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ. ಗಣ್ಯರ ಹೆಸರ ಹೇಳಿಕೊಂಡು ಚಿನ್ನಾಭರಣ ಖರೀದಿಸಿ ವಂಚನೆ ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕೋಲಾರದ ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರು ಕೇಳಿ ಬಂದಿದೆ.
2.945 ಕೆಜಿ ಚಿನ್ನ ಖರೀದಿಸಿ 2.42 ಕೋಟಿ ವಂಚಿಸಿದ ಆರೋಪದಲ್ಲಿ ಬಾಗಲಗುಂಟೆ ನಿವಾಸಿ ಶ್ವೇತಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಚಿನ್ನ, ಕಾರು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಅವಿನ್ಯೂ ರಸ್ತೆಯ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನಾಭರಣ ಖರೀದಿಸಿ ಹಣ ನೀಡದೆ ವಂಚನೆ ಮಾಡಿರುವುದಾಗಿ ದೂರು ಬಂದ ಹಿನ್ನೆಲೆ ಎಸಿಪಿ ಗೀತಾ ನೇತೃತ್ವದ ತಂಡದಿಂದ ತನಿಖೆ ನಡೆಸಿದ್ದಾರೆ. ಮೈಸೂರಿನಲ್ಲಿದ್ದ ಶ್ವೇತಳನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಇನ್ನೂ ಈಕೆ ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಎಂದು ಹೇಳಿಕೊಂಡಿದ್ದಾಳೆ. ಚಿನ್ನದ ವ್ಯಾಪಾರಿ ಎಂದು ಹೇಳಿಕೊಂಡು ಸಗಟು ದರದಲ್ಲಿ ಆಭರಣ ಖರೀದಿಸಿ ವಂಚನೆ ಮಾಡಿದ್ದಾಳೆ. ಕಮರ್ಷಿಯಲ್ ಸ್ಟ್ರೀಟ್ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್ ಮಾಲೀಕನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಬಳಿಕ ಬರೋಬ್ಬರಿ 2 ಕೋಟಿ ಮೌಲ್ಯದ ಚಿನ್ನ ಖರೀದಿಸಿದ್ದಾಳೆ. ಬಳಿಕ ಚಿನ್ನವನ್ನು ವಾಪಸ್ ನೀಡದೆ ಹಣವನ್ನೂ ನೀಡದೆ ವಂಚನೆ ಮಾಡಿದ್ದಾಳೆ. ಈ ಬಗ್ಗೆ ಜ್ಯುವೆಲರ್ಸ್ ಮಾಲೀಕ ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದರು.
ಶ್ವೇತಾ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಶ್ವೇತಾಳನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಪ್ರಕಾಶ್ ವಿಚಾರಣೆಗೆ ಪೊಲೀಸರು ನಿರ್ಧರಿಸಿದ್ದಾರೆ. ಮಹಿಳೆಯು ಮಾಜಿ ಸಚಿವ ವರ್ತೂರು ವಿಳಾಸ ನೀಡಿರುವುದರಿಂದ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಗಣ್ಯರ ಜೊತೆಗಿರುವ ಫೋಟೋ ದುರ್ಬಳಕೆ ಮಾಡಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ರಾಜಕಾರಣಿಗಳು ಹಾಗೂ ನಟ-ನಟಿಯರ ಜೊತೆ ಪೋಟೊ ತೆಗೆಸಿಕೊಂಡು ದುರ್ಬಳಕೆ ಮಾಡಿದ್ದಾರೆ.
ವರ್ತೂರು ಪ್ರಕಾಶ್ ಸ್ಪಷ್ಟನೆ
ಈ ಕುರಿತು ವರ್ತೂರು ಪ್ರಕಾಶ್ ಹೇಳಿಕೆ ನೀಡಿದ್ದು, ನಿನ್ನೆ ಸ್ಟೇಷನ್ ನಿಂದ ಮಾಹಿತಿ ಬಂತು, ಸೋಮವಾರ ಬನ್ನಿ ಅಂತಾ ಕರೆದಿದ್ದಾರೆ. ಸ್ಟೇಷನ್ ಗೆ ಹೋಗ್ತಿನಿ, ಮಾಹಿತಿ ಕೊಡ್ತೀನಿ. ಮೂರು ನಾಲ್ಕು ತಿಂಗಳ ಮುಂಚೆ ನಮ್ಮ ಮನೆಗೆ ಬಂದಿದ್ರು. ಸಮಾಜ ಸೇವಕಿ ಅಂತ ಪರಿಚಯ ಮಾಡ್ಕೊಂಡ್ರು. ಆಕೆ ನನಗೆ ತಿಳಿಸಿ ಒಡವೆ ಖರೀದಿಸಿಲ್ಲ, ಜ್ಯುವೆಲ್ಲರಿ ಮಾಲೀಕರು ನನಗೆ ತಿಳಿಸಿಲ್ಲ. ದೂರು ನೀಡಿರುವ ವಿಚಾರ ಒಡವೆ ಅಂಗಡಿಯವರು ತಿಳಿಸಿದ್ರು. ಆಕೆಯ ಬಿಜಿನೆಸ್ ಬಂಗಾರದ ಬಗ್ಗೆ ನನ್ನ ಬಳಿ ಪ್ರಸ್ತಾಪ ಮಾಡಿಯೇ ಇಲ್ಲ, ನನಗೂ ನಿನ್ನೆಯೇ ಗೊತ್ತಾಗಿದ್ದು. ಮನೆ ಹತ್ರ ಜನ ಬಂದ ಹಾಗೇ ಆಕೆ ಬಂದಿದ್ದಾಳೆ. ಪೊಲೀಸರು ಪೋನ್ ನಲ್ಲಿ ಹೇಳಿದ್ದಾರೆ, ಸೋಮವಾರ ಹೋಗ್ತೀನಿ ಎಂದು ಸ್ಪಷ್ಟನೆ ನೀಡಿದರು.