ದೇಶದ ಮೊದಲ ಏರ್ ಟ್ರೇನ್ (ಆಟೋಮೇಟೆಡ್ ಪೀಪಲ್ ಮೂವರ್-ಹಾಲಿ ಎಪಿಎಂ) ಸೇವೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರಂಭವಾಗಲಿದೆ. ಏರ್ಪೋರ್ಟ್ನಲ್ಲಿನ 3 ಟರ್ಮಿನಲ್ಗಳ ನಡುವೆ ಸಂಚಾರಕ್ಕೆ, ವಿಮಾನ ಇಳಿದ ಬಳಿಕ ಬೇರೆ ಪ್ರದೇಶಗಳಿಗೆ ತೆರಳುವ ಬಸ್ ಏರಲು ಅಥವಾ ಕ್ಯಾಬ್ ಆಗಮಿಸುವ ಸ್ಥಳಕ್ಕೆ ತೆರಳಲು ಪ್ರಯಾಣಿಕರು ಬಸ್ ಸೇವೆ ಬಳಸಬೇಕಿತ್ತು.
ಇದು ಸಾಕಷ್ಟು ಸಮಯ ತಿನ್ನುವ ಕೆಲಸ. ಹೀಗಾಗಿ ಪ್ರಯಾಣಿಕರ ಸುಗಮ ಸಂಚಾರಕ್ಕೆ 2000 ಕೋಟಿ ರುಪಾಯಿ ವೆಚ್ಚದಲ್ಲಿ 7.7 ಕಿ.ಮೀ ಉದ್ದದ ಏರ್ಟ್ರೇನ್ ಜಾರಿಗೆ ನಿರ್ಧರಿಸಲಾಗಿದೆ. 2027ರಲ್ಲಿ ಈ ವ್ಯವಸ್ಥೆ ಆರಂಭದ ಬಳಿಕ ಈಗಿನ ಬಸ್ ಸೇವೆ ಸ್ಥಗಿತಗೊಳಿಸಲಾಗುತ್ತದೆ.
ಏನಿದು ಏರ್ ಟ್ರೇನ್?
ಇದು ಕೂಡಾ ಇತರೆ ಮೆಟ್ರೋ ರೈಲಿನಂತೆಯೇ ಇರುತ್ತದೆ. ಸೀಮಿತ ಪ್ರಮಾಣದ ಬೋಗಿ ಹೊಂದಿರುತ್ತದೆ. ಹಳಿಗಳ ಮೇಲೆ ಚಲಿಸುತ್ತದೆ. ಪೂರ್ವ ನಿರ್ಧರಿತ ಟ್ರ್ಯಾಕ್ ಮೇಲೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಈ ಚಾಲಕ ರಹಿತ ರೈಲು ಸಂಚರಿಸುತ್ತದೆ. ಭೂಗತ ಅಥವಾ ಮೇಲು ಸೇತುವೆ ಮೇಲೆ ಚಲಿಸುವ ಕಾರಣ ಸಂಚಾರಕ್ಕೆ ಯಾವುದೇ ಅಡ್ಡಿ ಇರದು. ಇವನ್ನು ಬಳಸಿ ಬೇರೆ ಟರ್ಮಿನಲ್ಗೆ ಹೋಗಬಹುದು.