ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶುಕ್ರವಾರ ಪರಿಷ್ಕೃತ ನೀಟ್-ಯುಜಿ ಫಲಿತಾಂಶಗಳನ್ನು ಬಿಡುಗಡೆ ಮಾಡಿದ್ದು, ಟಾಪರ್ಗಳ ಸಂಖ್ಯೆ 61ರಿಂದ 17ಕ್ಕೆ ಇಳಿಕೆಯಾಗಿದೆ. ಆರಂಭದಲ್ಲಿ ಟಾಪರ್ಗಳೆಂದು ಘೋಷಿಸಲ್ಪಟ್ಟಿದ್ದ 67 ಅಭ್ಯರ್ಥಿಗಳಲ್ಲಿ 44 ಮಂದಿ ಪೂರ್ಣ ಅಂಕ ಪಡೆದಿದ್ದರು. ಭೌತಶಾಸ್ತ್ರ ವಿಷಯಕ್ಕೆ ಗ್ರೇಸ್ ಅಂಕ ನೀಡಿದ್ದರಿಂದ ಪೂರ್ಣ ಅಂಕಗಳನ್ನು ಈ ಅಭ್ಯರ್ಥಿಗಳು ಗಳಿಸಿದ್ದರು. ಬಳಿಕ ಕೆಲ ಕೇಂದ್ರಗಳಲ್ಲಿ ಸಮಯ ವ್ಯರ್ಥವಾಗಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್ ಅಂಕಗಳನ್ನು ಹಿಂಪಡೆಯಲಾಗಿತ್ತು. ಇದರಿಂದ ಟಾಪರ್ಗಳ ಸಂಖ್ಯೆ 67ರಿಂದ 61ಕ್ಕೆ ಇಳಿಕೆಯಾಗಿತ್ತು. ಇದೀಗ ಪರಿಷ್ಕೃತ ನೀಟ್-ಯುಜಿ ಫಲಿತಾಂಶ ಪ್ರಕಟವಾದ ಬಳಿಕ ಟಾಪರ್ಗಳ ಸಂಖ್ಯೆ 61ರಿಂದ 17ಕ್ಕೆ ಇಳಿಕೆಯಾಗಿದೆ.
ಫಲಿತಾಂಶದ ಪ್ರಕಾರ ಟಾಪ್ ಸ್ಕೋರರ್ಗಳು 99.9992714 ಪ್ರತಿಶತದೊಂದಿಗೆ ಪರಿಪೂರ್ಣ 720 ಅಂಕಗಳನ್ನು ಪಡೆದಿದ್ದಾರೆ. ಪ್ರತಿ ಪ್ರಶ್ನೆಗೆ ಒಂದೇ ಒಂದು ನಿಖರವಾದ ಉತ್ತರವನ್ನು ಸ್ವೀಕರಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಪರಿಷ್ಕೃತ ಫಲಿತಾಂಶದಲ್ಲಿ ಬದಲಾವಣೆ ಕಂಡುಬಂದಿದೆ. ಮೇ 5ರಂದು ನಡೆದ ನೀಟ್-ಯುಜಿ ಪರೀಕ್ಷೆಯ ವೇಳೆ ಸಮಯದ ಕೊರತೆ ಎದುರಿಸಿದ 1,563 ಅಭ್ಯರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್ ಅಂಕಗಳನ್ನು ರದ್ದುಪಡಿಸಿ ಅವರಿಗೆ ಜೂನ್ 23ರಂದು ಮರು-ಪರೀಕ್ಷೆ ನಡೆಸಲಾಗಿತ್ತು.