ತಿರುಪತಿ ತಿಮ್ಮಪ್ಪನ ಪ್ರಸಾದ ಲಡ್ಡುಗೆ ದನದ ಕೊಬ್ಬು, ಹಂದಿ ಕೊಬ್ಬು ಬಳಸಿರೋ ವಿವಾದ ಭುಗಿಲೆದ್ದಿದೆ. ಸದ್ಯ ಈ ಬಗ್ಗೆ ರಾಯಚೂರಿನಲ್ಲಿ ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಅವರು ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ಮುಜರಾಯಿ ಇಲಾಖೆಗಳಿಂದ ದೇಗುಲ, ಮಠಗಳನ್ನ ಮುಕ್ತಗೊಳಿಸಿ. ದೇವಸ್ಥಾನ, ಮಠಮಾನ್ಯಗಳನ್ನು ಕೇಂದ್ರ ಸರ್ಕಾರ ನಿರ್ವಹಣೆ ಮಾಡಲಿ. ಈ ಸಂಬಂಧ ಕೇಂದ್ರ ಸರ್ಕಾರ ಹೊಸ ಕಾಯ್ದೆ ಜಾರಿಗೊಳಿಸಲಿ ಎಂದು ಆಗ್ರಹಿಸಿದ್ದಾರೆ.
ಮಠಮಾನ್ಯ, ದೇವಸ್ಥಾನಗಳು ಆಯಾ ಪ್ರಾಂತ್ಯದ ಭಕ್ತರಿಗೆ ಸಂಪ್ರದಾಯಗಳಿಗೆ ಸಂಬಂಧಿಸಿದ ಶ್ರದ್ಧಾಕೇಂದ್ರಗಳು. ಇದನ್ನು ರಾಜ್ಯ ರಾಜಧಾನಿಯಲ್ಲಿ ಕುಳಿತು ನಡೆಸಲು ಆಗಲ್ಲ. ದೇಗುಲದಲ್ಲಿ ಸಮಸ್ಯೆ, ದೋಷ ಆದಾಗ ಸರ್ಕಾರ ಪರಿಶೀಲಿಸಬೇಕು. ಸುಮೋಟೋ ಹಾಕಿ ಅದನ್ನು ಸರಿಪಡಿಸುವ ಕೆಲಸವಷ್ಟೇ ಮಾಡಬೇಕು. ದೇಗುಲದ ವಿಚಾರದಲ್ಲಿ ಸರ್ಕಾರ ತಲೆಹಾಕವುದು, ಪಾವಿತ್ರ್ಯತೆ, ಸಂಪ್ರದಾಯಗಳನ್ನು ಬದಲಾಯಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಅಂಬೇಡ್ಕರ್ ಅವರು ನಮಗೆ ಸಂವಿಧಾನವನ್ನು ನೀಡಿದ್ದಾರೆ. ಆ ಪವಿತ್ರ ಗ್ರಂಥದಲ್ಲಿ ಇಂತಹುದಕ್ಕೆ ಅವಕಾಶ ಇಲ್ಲ ಎಂದು ಸುಬುಧೇಂದ್ರ ತೀರ್ಥರು ತಿಳಿಸಿದರು.
ರಾಯಚೂರಿನಲ್ಲಿ ಮಾತನಾಡಿದ ಅವರು, ತಿರುಪತಿ ಶ್ರೀನಿವಾಸನ ಸನ್ನಿಧಾನ. ಹಿಂದೂಗಳ ವಿಶಿಷ್ಟವಾದ ಕೇಂದ್ರ. ಪ್ರಸಾದದಲ್ಲಿ ಕಳಪೆ ತುಪ್ಪದ ಮಾಹಿತಿ ಮಾಧ್ಯಮಗಳಲ್ಲಿ, ಜನರ ಬಾಯಲ್ಲಿದೆ. ಇದರ ಬಗ್ಗೆ ಸರ್ಕಾರ ಸಮಗ್ರ ತನಿಖೆ ಕೈಗೊಂಡು, ಯಾರ ಅಚಾತುರ್ಯದಿಂದ ನಡೆದಿದೆ? ಯಾವಾಗಿನಿಂದ ನಡೆದಿದೆ? ಅನ್ನೋದನ್ನ ತನಿಖೆ ನಡೆಸಬೇಕು. ಜನಪ್ರಿಯ ಪ್ರಧಾನ ಮಂತ್ರಿಗಳು ಈ ವಿಚಾರದಲ್ಲಿ ಪ್ರವೇಶ ಮಾಡಿದ್ದಾರೆ. ಪ್ರಸ್ತುತ ಆಂಧ್ರ ಮುಖ್ಯಮಂತ್ರಿಗಳು ಈ ಬಗ್ಗೆ ಸಿರಿಯಸ್ ಆಗಿ ವಿಚಾರಣೆ ನಡೆಸಿದ್ದಾರೆ. ಯಾರೇ ಮಾಡಿದ್ದರು, ಏನೇ ಮಾಡಿದ್ರು ಖಂಡನೀಯ. ಭಕ್ತರ ಶ್ರದ್ಧಾಕೇಂದ್ರದಲ್ಲಿ ಆಗಿದ್ದು ಹೇಯಕೃತ್ಯ, ಅಪಚಾರ. ಪ್ರಸಾದದಲ್ಲಿ ಈ ರೀತಿ ನಡೆದಿದ್ದನ್ನ ಖಂಡಿಸುತ್ತೇವೆ. ತಪ್ಪಿತಸ್ಥರಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಇನ್ನು ತಿರುಪತಿ ದೇವಸ್ಥಾನವನ್ನ ಶುದ್ಧೀಕರಿಸುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸುಬುಧೇಂದ್ರ ತೀರ್ಥರು, ನಿಜವಾಗಿಯೂ ಕಲಬೆರಿಕೆ ಆಗಿದ್ರೆ, ಪಶು ಕೊಬ್ಬು ಬೆರಿಕೆ ಆಗಿದ್ರೆ, ಆ ಬಗ್ಗೆ ಸಂರಕ್ಷಣೆ ಆಗಬೇಕು. ತಿರುಪತಿಯಲ್ಲಿ ಏನೇನು ಕ್ರಮಗಳಿದ್ದಾವೋ ಅವು ನಡೀಬೇಕು. ನಾವೂ ಕೂಡ ಉಳಿದ ಶ್ರೀಗಳಂತೆ ಖಂಡಿಸುತ್ತೇವೆ. ಈ ಬಗ್ಗೆ ಚರ್ಚೆಗಳಲ್ಲಿ ಭಾಗಿಯಾಗ್ತೇವೆ. ಶುದ್ಧೀಕರಣದಲ್ಲಿ ಭಾಗಿಯಾಗ್ತೇವೆ ಎಂದು ತಿಳಿಸಿದರು.
ಆರಾಧನೆ ವೇಳೆ ಮಂತ್ರಾಲಯಕ್ಕೆ ತಿರುಪತಿ ಲಡ್ಡು ಆಗಮಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀನಿವಾಸ ದೇವರ ಶೇಷ ವಸ್ತ್ರ ಬರುವಾಗ ಪ್ರಸಾದ, ಮಂತ್ರಾಕ್ಷತೆ, ಲಡ್ಡು ಎಲ್ಲವೂ ಬರತ್ತೆ. ಸಾರ್ವಜನಿಕರ ವಿತರಣೆಗೆ ಬರಲ್ಲ. ಬಂದಂತ ಪ್ರಸಾದವನ್ನ ಗೌರವದಿಂದ ಸ್ವೀಕರಿಸಿದ್ದೇವೆ. ಯಾವ್ಯಾವ ದೇವಸ್ಥಾನಗಳ ಪ್ರಸಾದ ಬರತ್ತೆ? ಏನು ಬರತ್ತೆ ಅದನ್ನ ಪರೀಕ್ಷಿಸಲಾಗಲ್ಲ. ಕೊಡುವವರ, ತರುವವರು, ಅದಕ್ಕೆ ಬೇಕಾದ ಪದಾರ್ಥ ಖರೀದಿಸುವವರು ಅದನ್ನ ಪರಿಶೀಲಸಬೇಕು. ಶೇಷವಸ್ತ್ರವನ್ನೇ ಪ್ರಸಾದ ಅಂತ ಸ್ವೀಕರಿಸಿ, ರಾಯರಿಗೆ ಸಮರ್ಪಣೆ ಮಾಡುತ್ತೇವೆ ಎಂದರು.
ಆಂಧ್ರದ ಕರ್ನೂಲ್ ಜಿಲ್ಲೆಯ ವಿಜಯಾ ಡೈರಿಯಿಂದ ಮಂತ್ರಾಲಯಕ್ಕೆ ತುಪ್ಪ ತರಿಸುತ್ತೇವೆ. ಕೊರೊನಾ ಮುಂಚೆ ನಂದಿನಿ ಡೈರಿಯಿಂದ ತುಪ್ಪವನ್ನೇ ತರಿಸುತ್ತಿದ್ದೆವು. ಅಲ್ಲಿ ಸಪ್ಲೈ ಮಾಡಲು ಎರಡು ರಾಜ್ಯಗಳನ್ನ ದಾಟಿ ಬರಬೇಕು. ಹೀಗಾಗಿ ವಿಜಯಾ ಡೈರಿಯಿಂದ ತರಿಸುತ್ತಿದ್ದೇವೆ. ವಿವಿಧ ಸಂಸ್ಥೆಗಳು, ಎಫ್ಸಿಐನ ಲೈಸೆನ್ಸ್ ಇರುವ ತುಪ್ಪವನ್ನೇ ತರಿಸುತ್ತೇವೆ. ಲ್ಯಾಬ್ ರಿಪೋರ್ಟ್ ಪಡೆದಿದ್ದೇವೆ. ಎಲ್ಲಿಂದ ವಸ್ತು ಪಡೆಯುತ್ತೇವೆ ಅದರ ಪರಿಶುದ್ಧತೆಯ ಎಫ್ಸಿಐ ಲ್ಯಾಬ್ ರಿಪೋರ್ಟ್ ಪಡೆಯುತ್ತೇವೆ ಎಂದರು.