ಗದಗ ಜಿಲ್ಲೆಯ ನರೇಗಲ್ ನ ಅನ್ನದಾನೇಶ್ವರ ಮಠದ 500 ವರ್ಷಗಳಷ್ಟು ಹಳೆಯ ಭೂಮಿಯನ್ನು ವಕ್ಫ್ ಬೋರ್ಡ್ ತನ್ನದೆಂದು ಹೇಳಿಕೊಂಡಿದೆ. ಮಠದ ಆಡಳಿತ ಮತ್ತು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, 2019-20ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಭೂಮಿಯನ್ನು ಮಠಕ್ಕೆ ಹಿಂದಿರುಗಿಸಬೇಕೆಂದು ಒತ್ತಾಯಿಸಲಾಗಿದೆ.
ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಅನ್ನದಾನೇಶ್ವರ ಮಠದ ಆಸ್ತಿಯಲ್ಲೂ ವಕ್ಫ್ ಹೆಸರು ನಮೂದಿಸಲಾಗಿದೆ. ಪಹಣಿ ತೆಗೆಸಿ ನೋಡಿದ ಮಠದ ಶ್ರೀಗಳು ಮತ್ತು ಭಕ್ತರು ಕಂಗಾಲಾಗಿದ್ದಾರೆ. 2019-20 ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಠದ ಆಸ್ತಿಯಲ್ಲಿ ವಕ್ಫ್ ಹೆಸರು ಸೇರ್ಪಡೆ ಆಗಿದೆ. ಪಹಣಿ ಬದಲಾವಣೆ ಮಾಡಿದ ಜಿಲ್ಲಾಡಳಿತ ವಿರುದ್ಧ ಮಠದ ಮುಪ್ಪಿನ ಬಸವಲಿಂಗ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹಾಲಕೇರಿ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಶ್ರೀಗಳು ಪ್ರತಿಕ್ರಿಯಿಸಿದ್ದು, 500 ವರ್ಷಗಳ ಇತಿಹಾಸ ಇರುವ ಮಠದ ಆಸ್ತಿ ವಕ್ಫ್ ಬೋರ್ಡ್ ಪಾಲಾಗಿದೆ. ನರೇಗಲ್ ಪಟ್ಟಣದ ಪ್ರಸಾದ ನಿಲಯದ 11.19 ಗುಂಟೆ ಎಕರೆ ಆಸ್ತಿ ವಕ್ಫ್ ಹೆಸರಿಗೆ ನಮೂದಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಕಣ್ಮನ ಸೆಳೆಯುತ್ತಿದೆ ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’.. ಡಿ- 27ಕ್ಕೆ ತೆರೆಗೆ
ಸರ್ವೆ ನಂಬರ್ 410/2ಬಿ 15 ಎಕರೆ 6 ಗುಂಟೆ ಜಮೀನು ದಾನವಾಗಿ ಮಠಕ್ಕೆ ಬಂದಿತ್ತು. 15 ಎಕರೆ ಆಸ್ತಿ ಪೈಕಿ 11 ಎಕರೆ 19ಗುಂಟೆ ಆಸ್ತಿಯಲ್ಲಿ ವಕ್ಫ್ ಅಂತ ನಮೂದಿಸಲಾಗಿದೆ. ಮಠದ ಆಸ್ತಿ ಉತಾರದಲ್ಲಿ ರೆಹಮಾನ್ ಶಾವಲಿ ದರ್ಗಾ ವಕ್ಫ್ ಆಸ್ತಿ ಅಂತ ಸೇರ್ಪಡೆ ಮಾಡಲಾಗಿದೆ. ಮಠದ ಉಚಿತ ಪ್ರಸಾದ ನಿಲಯದ ಹೆಸರಲ್ಲಿ ಕೇವಲ 3 ಎಕರೆ 27 ಗುಂಟೆ ನಮೂದಿಸಲಾಗಿದೆ. ನೋಟಿಸ್ ನೀಡದೇ ಏಕಾಏಕಿ ವಕ್ಫ್ ಹೆಸರಲ್ಲಿ ನಮೂದಿಸಿದ ಹಿನ್ನೆಲೆ ಶ್ರೀಗಳು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ವಕ್ಫ್ ಕಾನೂನು ಮರುಪರಿಶೀಲನೆಗೆ ಮಠದ ಭಕ್ತರು ಹಾಗೂ ಶ್ರೀಗಳು ಒತ್ತಾಯ ಮಾಡಿದ್ದಾರೆ. ನಮ್ಮ ಆಸ್ತಿ ಮಠಕ್ಕೆ ಮರಳಿ ಬಿಟ್ಟು ಕೊಡುವಂತೆ ಸರಕಾರಕ್ಕೆ ಆಗ್ರಹಿಸಿದ್ದಾರೆ. ಸರ್ಕಾರ ಕೂಡಲೇ ಮಠದ ಆಸ್ತಿ ಮಠಕ್ಕೆ ಬದಲಾಯಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಭಕ್ತರು ಎಚ್ಚರಿಕೆ ನೀಡಿದ್ದಾರೆ.