ಗದಗ: ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯಿಂದ ಸಹಕಾರಿಯಾಗಿದೆ ಎಂದು ಕರ್ನಾಟಕದ ಹಲವು ಮಹಿಳೆಯರು ಹೇಳಿಕೊಂಡಿದ್ದಾರೆ. ಗೃಹಲಕ್ಷ್ಮಿಯಿಂದ ಬಂದ ಹಣದಲ್ಲಿ ಮಹಿಳೆಯರು ಒಳ್ಳೆ ಒಳ್ಳೆಯ ಕೆಲಸಗಳನ್ನು ಮಾಡಿದ ಉದಾಹರಣೆಗಳಿವೆ. ಅದೇ ರೀತಿಯಲ್ಲಿ ಅತ್ತೆ-ಸೊಸೆ ಕೂಡಿಕೊಂಡು ಗೃಹಲಕ್ಷ್ಮಿ ಯೋಜನೆಯಿಂದ ದೊರೆತ ಹಣದಿಂದ ಬೋರ್ವೆಲ್ ಕೊರೆಸುವ ಮೂಲಕ ಗಮನ ಸೆಳೆದಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನಿವಾಸಿಯಾಗಿರುವ ಅತ್ತೆ ಮಾಬುಬೀ ಮಾಲಧಾರ, ಸೊಸೆ ರೋಷನ್ ಬೇಗ್ ಮಾಲಧಾರ ಅವರು ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು ಬರುತ್ತಿದ್ದ 2 ಸಾವಿರ ದುಡ್ಡು ಕೂಡಿಟ್ಟಿದ್ದರು. ಬೋರ್ವೆಲ್ ಕೊರೆಸಲು ಒಟ್ಟು 60 ಸಾವಿರ ರೂ. ಬೇಕಾಗಿತ್ತು. ಅದರಲ್ಲಿ ಅತ್ತೆ -ಸೊಸೆ ಕೂಡಿಟ್ಟ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬೋರ್ವೆಲ್ ಖರ್ಚಿಗೆ ತಮ್ಮ ಮಗನ ಕೈಗೆ ಹಣ ನೀಡಿ ಬೋರ್ವೆಲ್ ಕೊರೆಸಲು ಸಹಕಾರಿಯಾಗಿದ್ದಾರೆ. ಉಳಿದ ಹಣವನ್ನು ಮಗ ಹೊಂದಿಸಿ ಬೋರ್ವೆಲ್ ಖರ್ಚಿನ ಪೂರ್ಣ ಹಣವನ್ನು ಕೊಟ್ಟಿದ್ದಾರೆ. ಇವರಿಗೆ 3 ಎಕರೆ ಜಮೀನು ಇದ್ದು, ಬೋರ್ವೆಲ್ ಕೊರೆಸಿದ್ದರಿಂದ ಕೊಳವೆಬಾವಿಯಲ್ಲಿ ನೀರು ಉಕ್ಕಿದೆ. ಇದರಿಂದ ಅವರ ಕುಟುಂಬ ಹರ್ಷವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಅತ್ತೆ-ಸೊಸೆಯ ಈ ಯಶೋಗಾಥೆಯನ್ನು ಕೊಂಡಾಡಿದ್ದಾರೆ. ಮಹಿಳೆಯರು ಸ್ವಾವಲಂಬಿಗಳಾಗುವ ಉದ್ದೇಶ ಈಡೇರಿದೆ. ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದ್ದಯ ಸಂತೃಪ್ತಿ ತಂದಿದೆ ಎಂದು ಅತ್ತೆ- ಸೊಸೆಯ ಈ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.