ಬೆಂಗಳೂರಿನ ಗಲ್ಲಿ-ಗಲ್ಲಿಯಲ್ಲು ಗಣೇಶೋತ್ಸವದ ಸಂಭ್ರಮ..ಸಡಗರ. ಎಲ್ಲಿ ನೋಡಿದ್ರು ಗಣಪತಿ ಬಪ್ಪ ಮೋರಿಯಾ ಘೋಷಣೆ. ಗಣೇಶ ವಿಸರ್ಜನೆ ಜೋಶ್ ನಲ್ಲಿ ಯಡವಟ್ಟೊಂದು ನೆಡೆದಿದೆ. ಗಣಪನ ಮೂರ್ತಿ ಜೊತೆ ಚಿನ್ನದ ಸರವೂ ನೀರಿನಲ್ಲಿ ವಿಸರ್ಜನೆ ಮಾಡಿದ್ದಾರೆ. ಮಾಗಡಿ ರೋಡ್ ಸಮೀಪ ದಾಸರಹಳ್ಳಿಯ ಬಿ.ಆರ್.ಐ ಕಾಲೋನಿಯ ನಿವಾಸಿಯಾದ ಉಮಾದೇವಿ ಅವರ ಮನೆಯಲ್ಲಿ ನಿನ್ನೆ ಗಣೇಶನ ಮೂರ್ತಿ ಕೂರಿಸಿ ಪೂಜೆ ಮಾಡಿ ಬಳಿಕ ವಿಸರ್ಜನೆ ಮಾಡಿದ್ರು. ವಿಸರ್ಜನೆ ಮಾಡುವ ಜೋಶ್ ನಲ್ಲಿ ಯಡವಟ್ಟು ಆಗಿಹೋಗಿದೆ.
ಗಣೇಶನಿಗೆ 60 ಗ್ರಾಂ ಚಿನ್ನದ ಸರ ಹಾಕಿ ಪೂಜೆ ಮಾಡಿದ್ರು. ಬಳಿಕ ಗಣೇಶ ವಿಸರ್ಜನೆಗಾಗಿ ಬಿಬಿಎಂಪಿ ಮಾಡಿದ್ದ ಟ್ರಕ್ ಗೆ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಹೋಗಿ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ಆದರೆ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಚಿನ್ನದ ಸರದ ನೆನಪಾಗಿ ಕುಟುಂವಸ್ಥರು ಪರದಾಡಿದ್ದಾರೆ. ತಕ್ಷಣ ವಿಜಯನಗರ ಶಾಸಕ ಪ್ರಿಯಕೃಷ್ಣ ಗಮನಕ್ಕೆ ತಂದಿದ್ದಾರೆ. ಸ್ಥಳೀಯರು ಹಾಗೂ ಟ್ರಕ್ ಸಿಬ್ಬಂದಿ ಸಹಾಯಕ್ಕೆ ಬಂದಿದ್ದಾರೆ, ಟ್ರಕ್ ನೀರನ್ನ ಖಾಲಿ ಮಾಡಿ ಗಣೇಶ ಮೂರ್ತಿ ಕರಗಿದ್ದ ಮಣ್ಣಲ್ಲಿ ಚಿನ್ನದ ಸರಕ್ಕೆ ಹುಡುಕಾಡಿದ್ದಾರೆ. ರಾತ್ರಿಯೆಲ್ಲ ಹುಡುಕಾಡಿದ ಬಳಿಕ ಇವತ್ತು ಬೆಳಗ್ಗೆ ಚಿನ್ನದ ಸರ ಸಿಕ್ಕಿದೆ. ಒಟ್ಟಾರೆ ಗಣೇಶ ವಿಸರ್ಜನೆ ವೇಳೆ ನೀರು ಸೇರಿದ್ದ 60 ಗ್ರಾಂ ಚಿನ್ನದ ಸರ ಸಿಕ್ಕಿದ್ದು ಕುಟುಂಬಸ್ಥರು ಸಂತಸಗೊಂಡಿದ್ದಾರೆ.