ಬೆಂಗಳೂರು ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕೋರ್ಸ್ ನೋಂದಣಿಗೆ ವಿವಿ ಸರಿಯಾದ ಮಾಹಿತಿ ನೀಡದ ಕಾರಣ, ಸಂಗೀತ ವಿದ್ಯಾರ್ಥಿಗಳ ‘ವೇದನೆ’ ಕೇಳುವವರೇ ಇಲ್ಲದಂತಾಗಿದೆ.
ನೋಂದಣಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ದೂರವಾಣಿ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ. ವಿವಿಯ ಆಡಳಿತ ಮಂಡಳಿ ಕೂಡ ಸ್ಪಷ್ಟನೆ ನೀಡುತ್ತಿಲ್ಲ. ವಿದ್ಯಾರ್ಥಿಗಳ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ವಿದ್ಯಾರ್ಥಿಗಳಿಗೆ ದಾರಿ ತೋಚದಂತಾಗಿದೆ.
ಈಗಾಗಲೇ ವಿವಿಗೆ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಆ ದಾಖಲೆಗಳನ್ನು ದೃಢೀಕರಣ ಮಾಡಲಾಗುತ್ತಿದೆ. ಮೈಸೂರು, ಬೆಂಗಳೂರು, ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿ ಸೇರಿ ಕೆಲವೇ ವ್ಯಾಪ್ತಿಯನ್ನು ನಿಗದಿ ಮಾಡಲಾಗಿದೆ. ಸಂಬಂಧಪಟ್ಟ ವ್ಯಾಪ್ತಿಯಲ್ಲಿರುವ ಜಿಲ್ಲೆಯಲ್ಲಿ ಸಂಗೀತ, ನೃತ್ಯ, ತಾಳವಾದ್ಯ ಸೇರಿ ಇನ್ನಿತರ ಸಂಗೀತದ ಪ್ರಕಾರಗಳನ್ನು ಅಭ್ಯಾಸ ಮಾಡುತ್ತಿರುವವರು ತಮ್ಮ ದಾಖಲೆಗಳನ್ನು ಭೌತಿಕವಾಗಿ ದೃಢೀಕರಣಗೊಳಿಸಬೇಕು. ದಾಖಲೆಗಳನ್ನು ದೃಢೀಕರಿಸಲು ಕೇವಲ ಒಂದು ದಿನ ಮಾತ್ರ ಸಮಯ ನೀಡುತ್ತದೆ. ನಿಗದಿತ ದಿನದಂದೇ ದಾಖಲೆ ದೃಢೀಕರಿಸದಿದ್ದರೆ, ನೋಂದಣಿ ರದ್ದಾಗುತ್ತದೆ. ಪರಿಣಾಮ ಪರೀಕ್ಷೆ ಅಥವಾ ಕೋರ್ಸ್ಗಳನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಅನ್ನೋದು ವಿದ್ಯಾರ್ಥಿಗಳ ಆರ್ತನಾದವಾಗಿದೆ.