ಅಮೆರಿಕ ನೇತೃತ್ವದಲ್ಲಿ ವಿವಿಧ ದೇಶಗಳು ಹೊಂದಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪರ್ಯಾಯವಾಗಿ ಸ್ವದೇಶಿ “ಭಾರತೀಯ ಅಂತರಿಕ್ಷ ನಿಲ್ದಾಣ’ ಸ್ಥಾಪನೆ ಗುರಿ ಹೊಂದಿರುವ ಕೇಂದ್ರ ಸರ್ಕಾರ ಅದರ ಸಾಕಾರಕ್ಕಾಗಿ ದೈತ್ಯ ರಾಕೆಟ್ ಅಭಿವೃದ್ಧಿಪಡಿಸುವ ಯೋಜನೆಗೆ ಅನುಮತಿ ನೀಡಿದೆ. ಭಾಗಶಃ ಮರುಬಳಕೆ ಮಾಡಬಹುದಾದ ನವಪೀಳಿಗೆಯ ಉಡ್ಡಯನ ವಾಹಕ ಅಭಿವೃದ್ಧಿಪಡಿಸುವ ಪ್ರಸ್ತಾವಕ್ಕೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇಸ್ರೋ ಬಳಿ ಈಗಾಗಲೇ ಇರುವ ದೈತ್ಯ ʻರಾಕೆಟ್ ಲಾಂಚ್ ವೆಹಿಕಲ್ ಮಾರ್ಕ್ 3ʼ (ಎಲ್ಎಂವಿ-3) ಗಿಂತ ಮೂರು ಪಟ್ಟು ಅಧಿಕಭಾರ ಹೊರುವ ಸಾಮರ್ಥ್ಯವನ್ನು ಎನ್ಜಿಎಲ್ ಹೊಂದಿರಲಿದೆ.
ಎಲ್ಎಂವಿ-3ಗೆ ಹೋಲಿಸಿದರೆ ವೆಚ್ಚ ಒಂದೂವರೆ ಪಟ್ಟು ಹೆಚ್ಚಾಗುತ್ತದೆ. ಎನ್ಜಿಎಲ್ವಿಗಾಗಿ 8240 ಕೋಟಿ ರು. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. 2040ರಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಚಂದ್ರಯಾನಕ್ಕೂ ಈ ರಾಕೆಟ್ ಬಳಕೆಗೆ ಬರಲಿದೆ. ಅಭಿವೃದ್ಧಿ ಹಂತವನ್ನು ಮುಗಿಸಲು 8 ವರ್ಷಗಳ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.