ಕೇಂದ್ರ ಬಜೆಟ್ ಬಳಿಕ ಚಿನ್ನದ ಬೆಲೆ ಕುಸಿತ ಮುಂದುವರಿದಿದೆ. ದೆಹಲಿಯಲ್ಲಿ ಸೋಮವಾರ 10 ಗ್ರಾಂ ಚಿನ್ನ 950 ರುಪಾಯಿಯಷ್ಟು ಇಳಿಕೆ ಕಂಡಿದೆ. ಇದರಿಂದ ಒಂದು ವಾರದಲ್ಲಿ ಚಿನ್ನ 10 ಗ್ರಾಂಗೆ 4500 ರುಪಾಯಿಯಷ್ಟು ಕುಸಿದಂತಾಗಿದೆ. ಕಳೆದ ವಾರ ಕೇಂದ್ರ ಬಜೆಟ್ನಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.15ರಿಂದ 6ಕ್ಕೆ ಇಳಿಸಿದ ಬಳಿಕ ಆರಂಭವಾಗಿರುವ ಬೆಲೆ ಕುಸಿತ ಮುಂದುವರೆದಿದೆ. ಸೋಮವಾರವೂ ದೆಹಲಿ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 950 ರುಪಾಯಿ ಕಡಿಮೆಯಾಗಿ 10 ಗ್ರಾಂಗೆ 71,050 ರುಪಾಯಿಗೆ ತಲುಪಿದೆ. 22 ಕ್ಯಾರೆಟ್ ಚಿನ್ನ ಗ್ರಾಂಗೆ 1,650 ರುಪಾಯಿ ಕಡಿಮೆಯಾಗಿ 70,700 ರುಪಾಯಿಗೆ ತಲುಪಿದೆ. ಒಂದೇ ವಾರದಲ್ಲಿ 4500 ರುಪಾಯಿ ಇಳಿದಿದೆ. ಮತ್ತೊಂದೆಡೆ ಬೆಳ್ಳಿ ಬೆಲೆ ಕೆ.ಜಿಗೆ 4500 ರುಪಾಯಿ ಕಡಿಮೆಯಾಗಿ 84,500 ರುಪಾಯಿಗೆ ಕುಸಿತ ಕಂಡಿದೆ. ಇದು ಈ ವರ್ಷದಲ್ಲಿ 1 ದಿನದಲ್ಲೇ ಅತಿ ಹೆಚ್ಚು ಕುಸಿತವಾಗಿದೆ.